Yakshagana: ಯಕ್ಷಗಾನಕ್ಕೆ 'ರಾಜ್ಯ ಕಲೆ' ಪಟ್ಟ ನೀಡುವಂತೆ ಸರ್ಕಾರಕ್ಕೆ ಮನವಿ

Yakshagana: ಯಕ್ಷಗಾನಕ್ಕೆ 'ರಾಜ್ಯ ಕಲೆ' ಪಟ್ಟ ನೀಡುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

Oct 4, 2026 - 15:02
Yakshagana: ಯಕ್ಷಗಾನಕ್ಕೆ 'ರಾಜ್ಯ ಕಲೆ' ಪಟ್ಟ ನೀಡುವಂತೆ ಸರ್ಕಾರಕ್ಕೆ ಮನವಿ

ಉಡುಪಿ: ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆಯಾಗಿರುವ ಯಕ್ಷಗಾನ ಕಲೆಯನ್ನು 'ರಾಜ್ಯ ಕಲೆ'ಯಾಗಿ ಅಧಿಕೃತವಾಗಿ ಘೋಷಿಸಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೇರಳದಲ್ಲಿ ಕಥಕ್ಕಳಿ ಹಾಗೂ ಮೋಹಿನಿಯಾಟ್ಟಂ ರಾಜ್ಯ ಕಲೆಯಾಗಿರುವಂತೆ, ಮಹಾರಾಷ್ಟ್ರದಲ್ಲಿ ಲಾವಣಿ, ಆಂಧ್ರಪ್ರದೇಶದಲ್ಲಿ ಕೂಚಿಪುಡಿ ರಾಜ್ಯ ಕಲೆಯಾಗಿರುವ ರೀತಿಯಲ್ಲಿಯೇ, ಕರ್ನಾಟಕದಲ್ಲಿ 'ಯಕ್ಷಗಾನ'ಕ್ಕೆ ರಾಜ್ಯ ಕಲೆಯ ಸ್ಥಾನಮಾನ ದೊರಕಬೇಕು ಎಂಬುದು ಕಲಾವಿದರ ಮತ್ತು ಕಲಾಭಿಮಾನಿಗಳ ಹಲವು ದಶಕಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ, ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯಕ್ಷಗಾನವು ಮುಖ್ಯವಾಗಿ ಪಡುವಲಪಾಯ ಮತ್ತು ಮೂಡಲಪಾಯ ಎಂಬ ಎರಡು ಪ್ರಭೇದಗಳಲ್ಲಿ ಬೆಳೆದು ಬಂದಿದೆ. ಪಡುವಲಪಾಯದಲ್ಲಿ ತೆಂಕು, ಬಡಗು ಹಾಗೂ ಬಡಾಬಡಗು ಎಂಬ ಮೂರು ಶೈಲಿಗಳಿವೆ. ರಾಜ್ಯಾದ್ಯಂತ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಜನರನ್ನು ತಲುಪುವಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದ್ದಾರೆ. 

ಯಕ್ಷಗಾನದಲ್ಲಿ ಕೇವಲ ನೃತ್ಯ ಮಾತ್ರವಲ್ಲ, ಇದು ಒಂದು ಪರಿಪೂರ್ಣ ರಂಗಕಲೆ. ಭಾಗವತಿಕೆ, ಹಾಡುಗಾರಿಕೆ, ವಾದ್ಯ ಸಂಗೀತ, ಸಂಭಾಷಣೆ, ಅಭಿನಯ, ನೃತ್ಯ, ಅದ್ಧೂರಿ ವೇಷಭೂಷಣ, ಮುಖವರ್ಣಿಕೆ ಮತ್ತು ರಂಗಭೂಮಿ ಎಲ್ಲವೂ ಒಂದಾಗಿ ಸೇರಿ ಪ್ರೇಕ್ಷಕನಿಗೆ ದೈವಿಕ ಅನುಭವ ನೀಡುತ್ತದೆ. ಇದೊಂದು ದೃಶ್ಯಕಾವ್ಯವಿದ್ದಂತೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಈ ಕಲೆಗೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿರುವ ಸುಮಾರು 15 ಸಾವಿರಕ್ಕೂ ಅಧಿಕ ವೃತ್ತಿ ಕಲಾವಿದರಿದ್ದಾರೆ. ಹವ್ಯಾಸಿ ಕಲಾವಿದರ ಸಂಖ್ಯೆಯೂ ಸಾವಿರಾರು ದಾಟುತ್ತದೆ. ರಾಜ್ಯದಲ್ಲಿ 100ಕ್ಕೂ ಅಧಿಕ ಯಕ್ಷಗಾನ ಮೇಳಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. 10 ಸಾವಿರಕ್ಕಿಂತ ಹೆಚ್ಚು ಪ್ರಸಂಗ ಕೃತಿಗಳು ಮತ್ತು 10 ಲಕ್ಷಕ್ಕೂ ಅಧಿಕ ಹಾಡುಗಳು ಈ ಕಲಾ ಪ್ರಕಾರದ ಶ್ರೀಮಂತಿಕೆಯನ್ನು ಸಾರುತ್ತವೆ ಎಂದು ಹೇಳಿದ್ದಾರೆ.

ಈ ಕಲೆಯ ಕುರಿತು ಈಗಾಗಲೇ ಮೂಡಲಪಾಯ ಮತ್ತು ಪಡುವಲಪಾಯ ಎರಡರಲ್ಲೂ 50ಕ್ಕೂ ಹೆಚ್ಚು ಪಿಎಚ್‌ಡಿ ಮತ್ತು ಎಂಫಿಲ್ ಅಧ್ಯಯನಗಳು ನಡೆದಿವೆ. ಇದು ಕೇವಲ ಮನರಂಜನೆಯ ಕಲೆಯಲ್ಲ. ಇದು ಮಾನವೀಯ ಮೌಲ್ಯಗಳನ್ನು ಸಾರುವ, ನೈತಿಕತೆ ಮತ್ತು ಧರ್ಮವನ್ನು ಬೋಧಿಸುವ ಜನಶಿಕ್ಷಣದ ಒಂದು ಸಾಂಸ್ಕೃತಿಕ ಮಾಧ್ಯಮವೂ ಹೌದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಹೀಗಾಗಿ ಸರ್ಕಾರ ಕೂಡಲೇ ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಘೋಷಿಸಿ, ಅದರ ಸಂರಕ್ಷಣೆ, ಪ್ರೋತ್ಸಾಹ ಹಾಗೂ ಕಲಾವಿದರ ಕಲ್ಯಾಣಕ್ಕೆ ಅಗತ್ಯವಾದ ಯೋಜನೆಗಳನ್ನು ರೂಪಿಸಬೇಕು ಎಂದು ತಲ್ಲೂರು ಶಿವರಾಮ ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.