ದ.ಕ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸತತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು: ಇನ್ನು ಮಂಗಳೂರು ನೈಋತ್ಯ ರೈಲ್ವೆ ವ್ಯಾಪ್ತಿಗೆ

MP Brijesh Chowta: ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸತತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು ದೊರೆತಿದೆ. ಇನ್ನು ಮಂಗಳೂರು ನೈಋತ್ಯ ರೈಲ್ವೆ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ.

Aug 21, 2026 - 20:11
Aug 21, 2026 - 20:14
ದ.ಕ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸತತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು: ಇನ್ನು ಮಂಗಳೂರು ನೈಋತ್ಯ ರೈಲ್ವೆ ವ್ಯಾಪ್ತಿಗೆ

ಮಂಗಳೂರು: 'ದಕ್ಷಿಣ ರೈಲ್ವೆ' ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು 'ನೈಋತ್ಯ ರೈಲ್ವೆ'ಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದೆ. ಶೀಘ್ರ ಗೆಜೆಟೆಡ್ ನೋಟಿಫಿಕೇಶನ್  ಹೊರಬೀಳಲಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯೊಂದು ಈಡೇರುತ್ತಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ (Brijesh Chowta) ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ಐತಿಹಾಸಿಕ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಭಾಗದ ರೈಲ್ವೆ ಸಂಪರ್ಕ ಜಾಲವು ಸದ್ಯ ದಕ್ಷಿಣ ರೈಲ್ವೆ ವ್ಯಾಪ್ತಿಯ ಪಾಲ್ಘಾಟ್‌ ವಿಭಾಗ ಹಾಗೂ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಮೈಸೂರು ವಿಭಾಗದೊಂದಿಗೆ ಹಂಚಿಕೊಂಡಿದೆ. ಹೀಗಾಗಿ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಅಳವಡಿಕೆ ಸೇರಿ ನಾನಾ ಸಂದರ್ಭದಲ್ಲಿ ಸಾಕಷ್ಟು ಆಡಳಿತಾತ್ಮಕ ಸವಾಲುಗಳು ಎದುರಾಗುತ್ತಿದ್ದವು. ಇದರಿಂದಾಗಿ ಮಂಗಳೂರು ಭಾಗದ ಪೂರ್ತಿ ರೈಲು ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯಿಂದ ಪ್ರತ್ಯೇಕಿಸಿ, ನೈಋತ್ಯ ವಲಯಕ್ಕೆ ಸೇರ್ಪಡೆಗೊಳಿಸಬೇಕೆಂಬುದು ಈ ಭಾಗದ ಜನರ ಬಹುವರ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಸದ್ಯ ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ  ಸೇರಿಸಿ, ಈ ಭಾಗದ ಜನರ ಕನಸನ್ನು ರೈಲ್ವೆ ಸಚಿವಾಲಯವು ನನಸಾಗಿಸಿರುವುದು ಸಂಸದನಾಗಿ ಬಹಳ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

2024ರಲ್ಲಿ ಸಂಸದನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ಮಂಗಳೂರು ಭಾಗದ ರೈಲ್ವೆ ಅಭಿವೃದ್ಧಿಗೆ ಬಹುದೊಡ್ಡ ಸವಾಲಾಗಿದ್ದ ಈ ವ್ಯಾಪ್ತಿ ಸಮಸ್ಯೆ ಸರಿಪಡಿಸುವ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಎಲ್ಲ ರೀತಿಯ ಪ್ರಯತ್ನ ಆರಂಭಿಸಿದ್ದೆ. ಈ ವಿಚಾರವನ್ನು ಮೊದಲು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಗಮನಕ್ಕೆ ತಂದು, ಲಭ್ಯವಿದ್ದ ಎಲ್ಲಾ ಸಂಸದೀಯ ಮತ್ತು ಸಾಂಸ್ಥಿಕ ವೇದಿಕೆಗಳಲ್ಲೂ ಈ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಲಾಗಿತ್ತು. ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದ ವಿ.ಸೋಮಣ್ಣ, ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ, ಅವರ ಗಮನಕ್ಕೂ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಲಾಗಿತ್ತು. ಆ ಬಳಿಕ ಲೋಕಸಭೆಯಲ್ಲಿಯೂ ವಿವಿಧ ವಲಯಗಳಲ್ಲಿ ಹಂಚಿಕೊಂಡಿರುವ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ವಲಯಕ್ಕೆ ಸೇರಿಸಬೇಕೆಂದು ಸದನದಲ್ಲಿ ರೈಲ್ವೆ ಸಚಿವರನ್ನು ಒತ್ತಾಯಿಸಲಾಗಿತ್ತು. ಅದರಂತೆ ಕಳೆದ ಎರಡು ವರ್ಷಗಳಿಂದ ರೈಲ್ವೆ ಸಚಿವಾಲಯ ಹಾಗೂ ಇಲಾಖೆಗಳೊಂದಿಗೆ ನಡೆಸಿದ್ದ ನಿರಂತರ ಫಾಲೋಅಪ್‌ ಹಾಗೂ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಮಟ್ಟಿಗೆ ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ. ಈ ಬದಲಾವಣೆಯಿಂದಾಗಿ, ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಾಳಿತಾತ್ಮಕ ಗೊಂದಲ ನಿವಾರಣೆಯಾಗಿ ರೈಲ್ವೆ ಅಭಿವೃದ್ಧಿ ವಿಚಾರಗಳಲ್ಲಿ ಹೆಚ್ಚಿನ ಅನುಕೂಲತೆ ಹಾಗೂ ತ್ವರಿತ ನಿರ್ಧಾರಗಳು ಆಗಲಿದೆ. ಇಲಾಖೆಗಳ ನಡುವಿನ ಸಮನ್ವಯತೆ ಕೂಡ ಹೆಚ್ಚಲಿದ್ದು, ಪ್ರಯಾಣಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿ, ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಮತ್ತು ಸಂಪರ್ಕದ ಅಭಿವೃದ್ಧಿಗೂ ಇದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ವಿವರಿಸಿದ್ದಾರೆ.

ದಕ್ಷಿಣ ಕನ್ನಡ ಜನರ ಪಾಲಿಗೆ ಬಹು ವರ್ಷಗಳಿಂದ ಈಡೇರದೆ ಬಾಕಿಯಾಗಿದ್ದ ಈ ಬೇಡಿಕೆಗೆ ಸ್ಪಂದಿಸಿ ಮಂಗಳೂರು ರೈಲ್ವೆ ಪ್ರದೇಶವನ್ನು ಕೇರಳದ ವ್ಯಾಪ್ತಿಯ ದಕ್ಷಿಣ ರೈಲ್ವೆಯಿಂದ ಬೇರ್ಪಡಿಸಿ, ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರಿಸುವ ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ರೈಲ್ವೆ ಸಚಿವರ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.