IIPM: 21ನೇ ಘಟಿಕೋತ್ಸವ.. 343 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
IIPM: ಬೆಂಗಳೂರಿನ ಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆಯ 21ನೇ ಘಟಿಕೋತ್ಸವವು ಬುಧವಾರ ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಂಗಳೂರು: ಇಲ್ಲಿನ ಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆಯ (IIPMB), 21ನೇ ಘಟಿಕೋತ್ಸವವು ಬುಧವಾರ ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಒಟ್ಟು 343 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಪಿಜಿಡಿಎಂ-ಎಬಿಪಿಎಂನ 178, ಪಿಜಿಡಿಎಂ-ಎಫ್‌ಪಿಬಿಎಂನ 105 ಹಾಗೂ ಪಿಜಿಡಿಎಂ-ಎಇಬಿಎಂನ 60 ವಿದ್ಯಾರ್ಥಿಗಳು ಸೇರಿದ್ದಾರೆ. ಇವರುಗಳು 2022-24 ಮತ್ತು 2023-25ನೇ ಬ್ಯಾಚ್‌ಗಳ ವಿದ್ಯಾರ್ಥಿಗಳಾಗಿದ್ದಾರೆ.
'ಸ್ಯಾಮ್ ಅಗ್ರಿ ಗ್ರೂಪ್' ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಕೆ.ನಾಯ್ಡು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮಾಡಿದರು. ತಮ್ಮ ಉದ್ಯಮಶೀಲತಾ ಪಯಣ ಹಾಗೂ ಕಂಪನಿ ಬೆಳವಣಿಗೆಯ ಕುರಿತು ವಿವರಿಸಿದರು.

ಭಾರತದಲ್ಲಿ ತಾಜಾ ಹಣ್ಣುಗಳ ರಫ್ತು & ಆಮದು ಬಗ್ಗೆ ಸಾಕಷ್ಟು ಅರಿವು ಇಲ್ಲದಿದ್ದ ಆರಂಭಿಕ ಹಂತದಲ್ಲಿ, ಹೊಸ ಅವಕಾಶಗಳನ್ನು ಗುರುತಿಸಿ ಮಾರುಕಟ್ಟೆ ನಿರ್ಮಿಸಿದ ತಮ್ಮ ಅನುಭವವನ್ನು ಅವರು ಹಂಚಿಕೊಡಿದರು.
ವಿಶೇಷವಾಗಿ, ಭಾರತೀಯ ಗ್ರಾಹಕರಿಗೆ ಹೆಚ್ಚು ಪರಿಚಿತವಾಗಿರದ 'ಬಟರ್‌ಫ್ರೂಟ್'ನ್ನು ಪರಿಚಯಿಸುವುದರೊಂದಿಗೆ, ಅದರ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಎದುರಾದ ಸವಾಲುಗಳು, ನಿರಂತರ ಪ್ರಯತ್ನ, ಮಾರುಕಟ್ಟೆಯ ಅರಿವು ಮತ್ತು ಅಪಾಯಗಳನ್ನು ಸ್ವೀಕರಿಸುವ ಮನೋಭಾವದ ಮಹತ್ವದ ಕುರಿತಾಗಿ ತಿಳಿ ಹೇಳಿದರು.
ವಿದ್ಯಾರ್ಥಿಗಳು ಉದ್ಯಮಶೀಲತೆಯನ್ನು ಒಂದು ವೃತ್ತಿ ಮಾರ್ಗವಾಗಿ ಪರಿಗಣಿಸುವಂತೆ ಪ್ರೋತ್ಸಾಹಿಸಿದ ಅವರು, ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುವುದರ ಮೂಲಕ ಅಥವಾ ಸ್ವಂತ ಉದ್ಯಮವನ್ನು ಪ್ರಾರಂಭಿಸುವುದರೊಂದಿಗೆ, ತಮ್ಮ ಉದ್ಯಮಶೀಲತಾ ಪಯಣವನ್ನು ಆರಂಭಿಸಬಹುದು ಎಂದು ಸಲಹೆ ನೀಡಿದರು.
ಯಶಸ್ಸು ದೊಡ್ಡ ಮಟ್ಟದಲ್ಲಿ ಆರಂಭವಾಗಬೇಕೆಂದಿಲ್ಲ. ಸಣ್ಣದಾಗಿ ಪ್ರಾರಂಭಿಸಿ, ಅನುಭವದಿಂದ ಕಲಿತು, ಸವಾಲುಗಳನ್ನು ಸ್ವೀಕರಿಸಿ, ಹಂತ ಹಂತವಾಗಿ ಬೆಳೆಯುತ್ತಾ ಉದ್ಯಮಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಐಐಪಿಎಂ ಅಧ್ಯಕ್ಷರು ಮತ್ತು ಸಿಎಸ್ಇಜಡ್ ಅಭಿವೃದ್ಧಿ ಆಯುಕ್ತೆ ಪಿ.ಹೇಮಲತಾ ಐಎಎಸ್ ಘಟಿಕೋತ್ಸವದ ಅಧ್ಯಕ್ಷೀಯ ಭಾಷಣ ಮಾಡಿದರು.
ಹಲವು ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ, ನಿರಂತರ ಕಲಿಕೆ ಮತ್ತು ಹೊಸ ಪರಿಸ್ಥಿತಿಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಮನೋಭಾವ ಇಂದಿನ ವೃತ್ತಿಜೀವನದಲ್ಲಿ ಅತ್ಯಗತ್ಯ ಎಂದು ತಿಳಿಸಿದರು.
'ಅಡೋಬ್' ಸಂಸ್ಥೆಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂತನು ನಾರಾಯಣ್ ವೃತ್ತಿಜೀವನದ ಉದಾಹರಣೆಯನ್ನು ನೀಡಿ, ಯಶಸ್ಸಿನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವಲ್ಲಿ ಪರಿಶ್ರಮ ಹಾಗೂ ನಿರಂತರ ಕಲಿಕೆಯ ಮಹತ್ವವನ್ನು ವಿವರಿಸಿದರು.
ಇದಕ್ಕೂ ಮುನ್ನಐಐಪಿಎಂ ನಿರ್ದೇಶಕ ಡಾ.ಎಸ್.ಸೆಂಥಿಲ್ ವಿನಾಯಗಂ, ಅತಿಥಿಗಳು ಮತ್ತು ಸಭಿಕರನ್ನು ಸ್ವಾಗತಿಸಿದರು. ನಿರ್ದೇಶಕರ ವರದಿಯನ್ನು ಮಂಡಿಸಿದರು. ಸಂಸ್ಥೆಯ ಪ್ರಮುಖ ಚಟುವಟಿಕೆಗಳು ಮತ್ತು ಸಾಧನೆಗಳನ್ನು ಕುರಿತು ತಿಳಿಸಿದರು. ಆ ಬಳಿಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣವಚನವನ್ನು ಬೋಧಿಸಿದರು.
ಘಟಿಕೋತ್ಸವದಲ್ಲಿ ಪಿಜಿಡಿಎಂ-ಎಬಿಪಿಎಂ, ಪಿಜಿಡಿಎಂ-ಎಫ್‌ಪಿಬಿಎಂ ಮತ್ತು ಪಿಜಿಡಿಎಂ-ಎಇಬಿಎಂ ವಿಭಾಗದ ವಿದ್ಯಾರ್ಥಿಗಳಿಗೆ ಹೇಮಲತಾ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.
ಶೈಕ್ಷಣಿಕ ಸಾಧನೆ ಮತ್ತು ಒಟ್ಟಾರೆ ಶ್ರೇಷ್ಠತೆಯನ್ನು ಗುರುತಿಸಿ ಒಟ್ಟು 27 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಗಳಲ್ಲಿ 9 ಚಿನ್ನದ ಪದಕಗಳು, 12 ಬೆಳ್ಳಿ ಪದಕಗಳು ಮತ್ತು 6 ಅತ್ಯುತ್ತಮ ಸರ್ವಾಂಗೀಣ ಸಾಧನೆ ಪ್ರಶಸ್ತಿಗಳು ಕೂಡ ಸೇರಿವೆ. ಜಿ.ವಿ.ಕೆ.ನಾಯ್ಡು ಪದಕಗಳನ್ನು ಪ್ರದಾನ ಮಾಡಿದರು.
ಐಐಪಿಎಂ ಡೀನ್ (ಅಕಾಡೆಮಿಕ್ಸ್) ಮತ್ತು ಪ್ರೊಫೆಸರ್ ಡಾ.ಎಸ್.ಜಾನ್ ಮನೋರಾಜ್ ವಂದಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.