ರಾಜ್ಯದಲ್ಲಿ ಮುಂದಿನ 6 ದಿನ ಮಳೆ: ನದಿಗಳ ಒಳಹರಿವು ಹೆಚ್ಚಳ

Karnataka Rain Update: ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಶುರುವಾಗಿದ್ದು, ಮುಂದಿನ 6 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Aug 3, 2026 - 11:34
ರಾಜ್ಯದಲ್ಲಿ ಮುಂದಿನ  6 ದಿನ ಮಳೆ: ನದಿಗಳ ಒಳಹರಿವು ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಶುರುವಾಗಿದ್ದು, ಮುಂದಿನ  6 ದಿನಗಳ ಕಾಲ  ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದ.ಕನ್ನಡ, ಉ.ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಭಾರೀ ಮಳೆಯಾಗಲಿದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಧಾರವಾಡ, ಹಾವೇರಿ,  ಬಳ್ಳಾರಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರದಲ್ಲೂ ಮಳೆಯಾಗಲಿದೆ.

ಇಲ್ಲಿ ರಜೆ ಘೋಷಣೆ:  

ಮುನ್ನೆಚ್ಚರಿಕೆ ಕ್ರಮವಾಗಿ, ಇಂದು (ಸೋಮವಾರ) ದಕ್ಷಿಣ ಕನ್ನಡದ ಬಹುತೇಕ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲೂಕಿನ  ಶಾಲಾ-ಕಾಲೇಜು ಹಾಗೂ ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆಗಳಿಗೂ ರಜೆ ನೀಡಲಾಗಿದೆ.

ಕೃಷ್ಣಾ ನದಿ ಆರ್ಭಟ: ರಸ್ತೆ ಬಂದ್‌: 

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದೆ. ಬೆಳಗಾವಿಯ ರಾಯಭಾಗ ತಾಲೂಕಿನ ಕುಡಚಿ ಸೇತುವೆ ಜಲಾವೃತವಾಗಿದ್ದು, ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. 

ಸದ್ಯ, ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಾಗದಿರುವ ಹಿನ್ನೆಲೆ, ಬೇರೆ ರಸ್ತೆಯಲ್ಲಿ  50 ಕಿ.ಮೀ ಹೆಚ್ಚುವರಿ ಸುತ್ತಾಟ ಮಾಡಬೇಕಾಗಿದೆ. ಭಾನುವಾರ ನದಿಗೆ 1.22 ಲಕ್ಷ ಕ್ಯುಸೆಕ್ ನೀರು ಬಂದಿತ್ತು. ಶನಿವಾರ 98 ಸಾವಿರ ಕ್ಯುಸೆಕ್ ನೀರು ಹರಿದು ಬಂದಿತ್ತು. ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.  

ತುಂಗಭದ್ರಾ ಅಬ್ಬರ: ಉಕ್ಕಡಗಾತ್ರಿ ಸ್ನಾನಘಟ್ಟ ಮುಳುಗಡೆ:

ಮಲೆನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತುಂಗಾ ಅಣೆಕಟ್ಟೆಯಿಂದ ತುಂಗಭದ್ರಾ ನದಿಗೆ ಹೆಚ್ಚಿನ ನೀರನ್ನು ಹರಿದು ಬಿಡಲಾಗುತ್ತಿದೆ. ದಾವಣಗೆರೆಯ ಹರಿಹರ ತಾಲೂಕಿನಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಉಕ್ಕಡಗಾತ್ರಿ ದೇಗುಲದ ಸ್ನಾನಘಟ್ಟ ಜಲಾವೃತವಾಗಿದೆ. 

ಭಕ್ತರು ನೀರಿಗೆ ಇಳಿಯಂತೆ ದೇವಸ್ಥಾನ ಆಡಳಿತ ಮಂಡಳಿಯು ಕೋರಿದೆ. ಬರೋಬ್ಬರಿ 92,000 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. 

ಕೆಆರ್‌ಎಸ್‌ ಜಲಾಶಯದಲ್ಲಿ 100 ಅಡಿ ನೀರು:

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಮಂಡ್ಯದ ಶೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ (ಕೆಆರ್‌ಎಸ್‌) ನೀರಿನ ಒಳಹರಿವು  ಏರಿಕೆಯಾಗುತ್ತಿದೆ. 3 ದಿನದಲ್ಲಿ ಬರೋಬ್ಬರಿ 8 ಅಡಿ ಹೆಚ್ಚಳವಾಗಿದೆ. 

ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಿದ್ದು, ಸದ್ಯ 100.34 ಅಡಿಯಷ್ಟು ತುಂಬಿದಿದೆ.  32,048 ಕ್ಯುಸೆಕ್ ಒಳಹರಿವಿದ್ದು, 1,821 ಕ್ಯುಸೆಕ್ ಹೊರಹರಿವಿದೆ. ಇದೇ ಪ್ರಮಾಣದಲ್ಲಿ ಒಳಹರಿವು ಬಂದರೆ, 15 ದಿನಗಳೊಳಗೆ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆಯಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.