ಉಷಾ ಕಿರಣ: ಪಶ್ಚಿಮ ಘಟ್ಟಗಳ ಪರಿಸರ & ಜೀವವೈವಿಧ್ಯ ಸಂರಕ್ಷಣೆಯ ಭರವಸೆಯ ಬೆಳಕು

Usha Kirana: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪರಿಸರ & ವನ್ಯಜೀವಿ ಸಂರಕ್ಷಣೆಗಾಗಿ 'ಉಷಾ ಕಿರಣ' ಸಂಸ್ಥೆ ಶ್ರಮಿಸುತ್ತಿದೆ.

Jul 23, 2026 - 14:44
ಉಷಾ ಕಿರಣ: ಪಶ್ಚಿಮ ಘಟ್ಟಗಳ ಪರಿಸರ & ಜೀವವೈವಿಧ್ಯ ಸಂರಕ್ಷಣೆಯ ಭರವಸೆಯ ಬೆಳಕು
'ಉಷಾ ಕಿರಣ' ಸಂಸ್ಥಾಪಕ ಬಿ.ವಿ.ಸುರೇಶ್ ಕುಮಾರ್

ಕರ್ನಾಟಕದ ಮಧ್ಯ ಪಶ್ಚಿಮ ಘಟ್ಟದ ಮಲೆನಾಡು ಭಾಗವಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪರಿಸರ & ವನ್ಯಜೀವಿ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಒಂದು ಪ್ರಮುಖ ಮತ್ತು ಬದ್ಧತೆಯುಳ್ಳ ಸಂಸ್ಥೆ ಉಷಾ ಕಿರಣ (Usha Kirana).

ಮಾನವ ಸಮುದಾಯಗಳ ಉಳಿವು, ಆರ್ಥಿಕ ಕಾರ್ಯಸಾಧ್ಯತೆ ಹಾಗೂ ಜೀವವೈವಿಧ್ಯತೆಯ ಸಂರಕ್ಷಣೆ - ಇವುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ವಿಧಾನಗಳನ್ನು ಅನ್ವೇಷಿಸುವುದು ಮತ್ತು ಅಭಿವೃದ್ಧಿಪಡಿಸುವುದು ಈ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. ಜಾತಿ, ಧರ್ಮ ಮತ್ತು ರಾಜಕೀಯದ ಹಂಗಿಲ್ಲದೆ, ಸಮುದಾಯ ಚಾಲಿತ ವಿಧಾನದ ಮೂಲಕ ಪ್ರಕೃತಿಯ ಒಳಿತಿಗಾಗಿ ಈ ಸಂಸ್ಥೆ ದಶಕಗಳಿಂದಲೂ ಅತ್ಯುನ್ನತ ನೈತಿಕತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

'ಉಷಾ ಕಿರಣ' ಸಂಸ್ಥೆಯು ಸಮಾನ ಮನಸ್ಕ, ಪರಿಸರ ಪ್ರೇಮಿಗಳ ಗುಂಪಾಗಿದೆ. ಸಂಸ್ಥಾಪಕ ಬಿ.ವಿ.ಸುರೇಶ್ ಕುಮಾರ್ ಹಾಗೂ ಉಷಾ ಸುರೇಶ್ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮುನ್ನಡೆಯುತ್ತಿದೆ. ಇವರೊಂದಿಗೆ, ಕಳೆದ 25 ವರ್ಷಗಳಿಂದ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಪ್ರಸಿದ್ಧ ಪರಿಸರ ಬರಹಗಾರ ಮತ್ತು ಸಂರಕ್ಷಣಾವಾದಿ ಅಖಿಲೇಶ್ ಚಿಪ್ಪಳಿ ಅವರು ಕೈಜೋಡಿಸಿದ್ದಾರೆ.  'ಜೋಗದ ಸಿರಿ ಕತ್ತಲಲ್ಲಿ' ಹಾಗೂ 'ಸೋಲುತ್ತಿದೆ ಸಹ್ಯಾದ್ರಿ' ಎಂಬ ಪುಸ್ತಕಗಳನ್ನು ರಚಿಸಿರುವ ಇವರು, ಪ್ರತಿಷ್ಠಿತ 'ಸುವರ್ಣ ಕರ್ನಾಟಕ ಪರಿಸರ ರತ್ನ' (2022-23) ಪ್ರಶಸ್ತಿಗೂ ಭಾಜನರಾಗಿದ್ದಾರೆ. 

ಹಾಗೆಯೇ, ಶರಾವತಿ ಕಣಿವೆ ವನ್ಯಜೀವಿ ಧಾಮವನ್ನು 431 ಚದರ ಕಿ.ಮೀ ನಿಂದ 930 ಚದರ ಕಿ.ಮೀಗೆ ವಿಸ್ತರಿಸಿ, ಅದನ್ನು 'ಸಿಂಗಳೀಕ ಅಭಯಾರಣ್ಯ'ವಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಐಯುಸಿಎನ್ (IUCN-WCPA) ಸದಸ್ಯರಾಗಿರುವ ಎಂಜಿನಿಯರ್ ವಿನಾಯಕ ಎಸ್.ಜಿ ಅವರು ಈ ಸಂಸ್ಥೆಯ ಮತ್ತೊಂದು ಆಧಾರ ಸ್ತಂಭವಾಗಿದ್ದಾರೆ. 

ವಿನಾಯಕ ಅವರು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯವನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದೊಂದಿಗೆ ಸಂಪರ್ಕಿಸುವ ಮಹತ್ವದ ಯೋಜನೆಯಲ್ಲೂ ಶ್ರಮಿಸಿದ್ದಾರೆ.

ಪ್ರಸ್ತುತ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಹೆಚ್ಚಾಗುತ್ತಿರುವುದನ್ನು ಅರಿತಿರುವ 'ಉಷಾ ಕಿರಣ' ಸಂಸ್ಥೆಯು ಪ್ರಮುಖವಾಗಿ ಮೂರು ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿದೆ. 

ಮೊದಲನೆಯದಾಗಿ, ಭಾರತ ಸರ್ಕಾರದ ನೂತನ ಕಾರ್ಬನ್ ಕ್ರೆಡಿಟ್ಸ್ (Carbon Credits) ಯೋಜನೆ, ಎರಡನೆಯದಾಗಿ, 2016ರಿಂದ ನಿರಂತರವಾಗಿ ನಡೆಯುತ್ತಿರುವ ಗ್ರೀನ್ ಕ್ರೆಡಿಟ್ಸ್ (Green Credits) ಯೋಜನೆ (ಇದರ ಅಡಿಯಲ್ಲಿ ಮರ ನೆಡುವುದು & ಮಳೆನೀರು ಕೊಯ್ಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ). ಮೂರನೆಯದಾಗಿ, ಜನಸಾಮಾನ್ಯರಲ್ಲಿ ಮತ್ತು ಭವಿಷ್ಯದ ಪೀಳಿಗೆಯಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಸಿಟಿಜನ್ ಸೈನ್ಸ್ (Citizen Science) ಮಾದರಿ ಹಾಗೂ ಮಾಧ್ಯಮಗಳ ಮೂಲಕ ನಡೆಯುತ್ತಿರುವ ವ್ಯಾಪಕ ಜಾಗೃತಿ ಅಭಿಯಾನ.

ಪಶ್ಚಿಮ ಘಟ್ಟಗಳ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲಾ ಪ್ರದೇಶವು ಶರಾವತಿ, ವರದಾ, ಅಘನಾಶಿನಿ, ಬೇಡ್ತಿ ನದಿಗಳ ಉಗಮಸ್ಥಾನವಾಗಿದ್ದು, ಅಪಾರ ಜೀವವೈವಿಧ್ಯವನ್ನು ಹೊಂದಿದೆ. ಒಂದು ಕಾಲದಲ್ಲಿ ವರ್ಷಕ್ಕೆ 320 ಇಂಚು ಮಳೆ ಪಡೆಯುತ್ತಿದ್ದ ಈ ಪ್ರದೇಶ, ದೊಡ್ಡ ಯೋಜನೆಗಳು, ಅರಣ್ಯ ಒತ್ತುವರಿ ಹಾಗೂ ಮಾನವನ ಹಸ್ತಕ್ಷೇಪದಿಂದಾಗಿ ಕ್ಷೀಣಗೊಂಡ ಅರಣ್ಯ ಪ್ರದೇಶವೀಗ ಇದೀಗ 100 ಇಂಚು ಮಳೆಗೆ ಕುಸಿದಿದೆ. ಆದರೂ, ಶರಾವತಿ ಸಿಂಗಳೀಕ ಕಣಿವೆಯು ಅಳಿವಿನಂಚಿನಲ್ಲಿರುವ ಸಿಂಗಳೀಕ (Lion-Tailed Macaque), ಮಲಬಾರ್ ಹಾರ್ನ್‌ಬಿಲ್ ಸೇರಿದಂತೆ 500ಕ್ಕೂ ಹೆಚ್ಚು ಮರಗಳ ಪ್ರಭೇದಗಳು, 45 ಬಗೆಯ ಸಸ್ತನಿಗಳು, 380ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಹಾಗೂ ಉಭಯಚರಗಳಿಗೆ ನೆಲೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭವಿಷ್ಯದ ಪೀಳಿಗೆಗೆ ಹಸಿರು ಪರಿಸರವನ್ನು ಬಳುವಳಿಯಾಗಿ ನೀಡುವ ಉದಾತ್ತ ಉದ್ದೇಶದಿಂದ 'ಉಷಾ ಕಿರಣ' ಸಂಸ್ಥೆಯು ಸಾಗರದ ಅಮಟೆಕೊಪ್ಪವನ್ನು ಕೇಂದ್ರವಾಗಿಟ್ಟುಕೊಂಡು ಶ್ರಮಿಸುತ್ತಿದೆ. ತಮ್ಮ ನಿಸ್ವಾರ್ಥ ಸೇವೆ ಹಾಗೂ ಪರಿಸರ ಬದ್ಧತೆಯ ಮೂಲಕ ಕರ್ನಾಟಕದ ಅರಣ್ಯ ಸಂರಕ್ಷಣಾ ಕ್ಷೇತ್ರದಲ್ಲಿ 'ಉಷಾ ಕಿರಣ'ವು ನಿಜಕ್ಕೂ ಒಂದು ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದೆ.