ಶಾಲ್ಮಲಿ ಮೂಲಿಕೆ: ಆರೋಗ್ಯ ವೃದ್ಧಿಗೆ ಸಹಕಾರಿ
Shalmali: 'ಶಾಲ್ಮಲಿ' ಆಯುರ್ವೇದದಲ್ಲಿ ಅತ್ಯಂತ ಪವಿತ್ರ ಹಾಗೂ ಔಷಧೀಯ ಗುಣವುಳ್ಳ ಮರವಾಗಿದೆ. ಇದು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.
'ಶಾಲ್ಮಲಿ' ಆಯುರ್ವೇದದಲ್ಲಿ ಅತ್ಯಂತ ಪವಿತ್ರ ಹಾಗೂ ಔಷಧೀಯ ಗುಣವುಳ್ಳ ಮರವಾಗಿದೆ. ಇದನ್ನು ಸಂಸ್ಕೃತದಲ್ಲಿ ಶಾಲ್ಮಲಿ, ಶಾಲ್ಮಲೀ ವೃಕ್ಷ ಎನ್ನುವರು. ಕನ್ನಡದಲ್ಲಿ ಬುರಗದ ಮರ, ಮುಳ್ಳುಬುರುಗ, ಕೆಂಪು ಬುರಗ ಎಂದು ಕರೆಯಲಾಗುತ್ತದೆ. ಇದರ ಸಸ್ಯಶಾಸ್ತ್ರೀಯ ಹೆಸರು 'Salmelia Malabarica'. ಇದು ಪತನಶೀಲ ಮರವಾಗಿದ್ದು, 20 ರಿಂದ 25 ಮೀಟರ್ ಎತ್ತರ ಬೆಳೆಯುತ್ತದೆ. ಕಾಂಡದ ಮೇಲೆ ಚೂಪಾದ ಮುಳ್ಳುಗಳಿರುತ್ತವೆ ಮತ್ತು ಬೇಸಿಗೆಯಲ್ಲಿ ಕೆಂಪು ಬಣ್ಣದ ದೊಡ್ಡ ಹೂವುಗಳು ಅರಳುತ್ತವೆ.
ಆಯುರ್ವೇದದ ಪ್ರಕಾರ ಶಾಲ್ಮಲಿಯ ಪಂಚಾಂಗಗಳಾದ ಬೇರು, ಕಾಂಡದ ತೊಗಟೆ, ಹೂವು, ಎಲೆ, ಹಾಗೂ ಅಂಟು ಎಲ್ಲವೂ ಔಷಧಿಯ ಗುಣಗಳನ್ನು ಹೊಂದಿವೆ.
ಶಾಲ್ಮಲಿ ಮುಸ್ಲಿ (ಬೇರು): ಇದರ ಎಳೆಯ ಬೇರನ್ನು ಶಾಲ್ಮಲಿ ಮುಸ್ಲಿ ಎನ್ನುತ್ತಾರೆ. ಪ್ರಸಿದ್ಧ ವಾಜೀಕರಣ ಔಷಧಿಯಾಗಿದ್ದು, ದೇಹಕ್ಕೆ ಶಕ್ತಿ, ಉತ್ಸಾಹ ನೀಡುತ್ತದೆ, ವೀರ್ಯ ವೃದ್ಧಿಸುತ್ತದೆ. ದೌರ್ಬಲ್ಯವನ್ನು ನಿವಾರಿಸುತ್ತದೆ. ಇದನ್ನು ಚೂರ್ಣ ಅಥವಾ ಪಾಕದ ರೂಪದಲ್ಲಿ ಸೇವಿಸಲಾಗುತ್ತದೆ.
ಮೋಚರಸ (ಅಂಟು): ಮರದಿಂದ ಸ್ರವಿಸುವ ಅಂಟಿಗೆ ಮೋಚರಸ ಎಂದು ಕರೆಯುತ್ತಾರೆ. ಇದು ಸ್ತಂಭನ ಗುಣ ಹೊಂದಿದೆ. ಅತಿಸಾರ, ರಕ್ತ ಭೇದಿ, ಅಧಿಕ ಋತುಸ್ರಾವ, ಬಿಳುಪಡುವಿಕೆ ಮುಂತಾದ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾರೆ. ಗಾಯವನ್ನು ಬೇಗ ಗುಣಪಡಿಸುತ್ತದೆ.
ಹೂವು & ತೊಗಟೆ: ಇದರ ಹೂವಿನ ದಳಗಳು ತಂಪು ಗುಣ ಹೊಂದಿದ್ದು, ಮೂತ್ರದ ಉರಿ, ಮೂತ್ರದಲ್ಲಿ ರಕ್ತ ಹೋಗುವುದು ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಬಳಸುತ್ತಾರೆ. ತೊಗಟೆಯ ಕಷಾಯವು ಮೊಡವೆ, ಹುಣ್ಣು, ಊತ, ಚರ್ಮ ರೋಗಗಳಿಗೆ ಲೇಪನವಾಗಿ ಉಪಯೋಗಿಸುತ್ತಾರೆ.
ಬುರಗದ ಹತ್ತಿ: ಈ ಮರದ ಕಾಯಿಯಿಂದ ಬರುವ ಹತ್ತಿ ಮೃದುವಾಗಿದೆ. ದಿಂಬು, ಹಾಸಿಗೆಗೆ ಬಳಸುತ್ತಾರೆ. ವಾತ ಮತ್ತು ಪಿತ್ತ ದೋಷಗಳನ್ನು ಶಮನ ಮಾಡುತ್ತದೆ.
ಶಾಲ್ಮಲಿಯು ಶೀತ ವೀರ್ಯ, ಮಧುರ ರಸ, ಗುರು ಮತ್ತು ಸ್ನಿಗ್ಧ ಗುಣಗಳನ್ನು ಹೊಂದಿದೆ. ಮಧುಮೇಹ, ಮೂಲವ್ಯಾಧಿ ಇರುವವರು ವೈದ್ಯರ ಸಲಹೆಯೊಂದಿಗೆ ಬಳಸುವುದು ಉತ್ತಮ.