ಅಂಬಿಕಾ ವಿದ್ಯಾಲಯ: ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ
Ambika Vidyalaya: ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ, ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಮಾತನಾಡಿದರು.
ಪುತ್ತೂರು: 'ಸಹಸ್ರಾರು ವರ್ಷಗಳಿಂದ ಪರಕೀಯರ ದಾಳಿ ಮೆಟ್ಟಿನಿಂತ, ನಮ್ಮ ಸೈನಿಕರ ಸಾಹಸಗಾಥೆಯೂ ಪ್ರೇರಣಾದಾಯಕ ಕಥೆಯಾಗಿದೆ. ಭಾರತದ ಹೆಮ್ಮೆಯ ಯೋಧರಿಂದಾಗಿ ನಾವುಗಳು ನಿರ್ಭಯವಾಗಿ ರಾತ್ರಿ ಮಲಗುತ್ತಿದ್ದೇವೆ. 1999ರ ಕಾರ್ಗಿಲ್ ಯುದ್ಧದಲ್ಲಿ ದೇಹಕ್ಕೆ ಗುಂಡು ಬಿದ್ದರೂ, ಸೈನಿಕರು ಶತ್ರು ರಾಷ್ಟ್ರದೊಂದಿಗೆ ಹೋರಾಡಿ, ಅವರನ್ನು ಹಿಮ್ಮೆಟ್ಟಿಸಿದರು' ಎಂದು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ, ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಈಚೆಗೆ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಯೋಧರು ದೇಶಕ್ಕಾಗಿ ಹುತಾತ್ಮರಾದರು. ಕ್ಯಾಪ್ಟನ್ ವಿಕ್ರಂ ಭಾತ್ರಾ, ಮನೋಜ್ ಪಾಂಡೆ ಮತ್ತು ಸೌರಭ್ ಕಾಲಿಯಾರಂತಹ ಅಪ್ಪಟ ದೇಶಭಕ್ತ ಸೈನ್ಯಾಧಿಕಾರಿಗಳನ್ನು ಯುದ್ಧದಲ್ಲಿ ಕಳೆದುಕೊಂಡಿದ್ದೇವೆ. ಮರುಭೂಮಿ ಅಥವಾ ಹಿಮಾಲಯವೇ ಆಗಿರಲಿ, ಬಿಸಲು - ಮಳೆಯನ್ನು ನಮ್ಮ ಸೈನಿಕರು ಕೆಲಸ ಮಾಡುತ್ತಿದ್ದು, ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಅವರು ಮಾತನಾಡಿ, ಭಾರತವು ಎಂದಿಗೂ ಯಾರ ಮೇಲೂ ಆಕ್ರಮಣ ಮಾಡಿಲ್ಲ. ಆದರೆ ತನ್ನ ಮೇಲೆ ದಾಳಿ ನಡೆಸಿದವರಿಗೆ ತಕ್ಕ ಉತ್ತರವನ್ನು ಕೊಟ್ಟಿದೆ. ಗಡಿಯಲ್ಲಷ್ಟೇ ಅಲ್ಲದೆ, ನಮ್ಮ ನಡುವೆಯೂ ದೇಶದ ವೈರಿಗಳಿದ್ದಾರೆ. ಅಂತಹವರ ಬಗ್ಗೆ ಸದಾ ಎಚ್ಚರದಿಂದಿರಬೇಕು ಎಂದು ತಿಳಿಸಿದರು.
ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಇದ್ದರು. ವಿದ್ಯಾರ್ಥಿ ಮಯೂರ್ ಎಸ್ ಮಯ್ಯ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸ್ಪಂದನಾ ಭಟ್ ಎಂ ಸ್ವಾಗತಿಸಿದರು. ಯುದ್ಧಕ್ಕೆ ಹೋರಾಡುವ ಸೈನಿಕನು ತನ್ನ ಸ್ನೇಹಿತನಿಗೆ ಬರೆದ ಪತ್ರದ ಕುರಿತು ವಿದ್ಯಾರ್ಥಿ ಯಶಸ್ ಬಿ.ಜೆ ಹಾಡಿನ ಮೂಲಕ ಪ್ರಸ್ತುತಪಡಿಸಿದರು. ವಿದ್ಯಾರ್ಥಿ ರತುಲ್ ಅದ್ವೈತ್ ಕೆ ವಂದಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಪಿ ನಿರೂಪಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.