Train Delay: ರಾತ್ರಿ ಇಡೀ ಪುತ್ತೂರಿನಲ್ಲೇ ಬಾಕಿಯಾದ ಮಂಗಳೂರು-ಬೆಂಗಳೂರು ರೈಲು; ಆತಂಕದಲ್ಲಿ ಪೊಲೀಸ್ ಪರೀಕ್ಷಾರ್ಥಿಗಳು!

Kozhikode-mangalore-bangalore train delay:ಕೇರಳದ ಕೋಝಿಕೋಡ್‌ ಕಡೆಯಿಂದ ಮಂಗಳೂರು ಮಾರ್ಗವಾಗಿ ಬಂದಿರುವ ಈ ರೈಲು ಸುಮಾರು ಒಂದು ತಾಸು ತಡವಾಗಿ ಕಬಕ-ಪುತ್ತೂರು ರೈಲು ನಿಲ್ದಾಣಕ್ಕೆ ಆಗಮಿಸಿತ್ತು. ಆದರೆ, ರಾತ್ರಿ ಸುಮಾರು 10.20ಕ್ಕೆ ಇಲ್ಲಿಗೆ ಬಂದಿರುವ ಈ ರೈಲು ಮಧ್ಯರಾತ್ರಿ 1.40 ದಾಟಿದರೂ ಪುತ್ತೂರು ನಿಲ್ದಾಣದಲ್ಲೇ ನಿಂತಿರುವುದರಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Aug 2, 2026 - 01:59
Aug 2, 2026 - 03:49
Train Delay: ರಾತ್ರಿ ಇಡೀ ಪುತ್ತೂರಿನಲ್ಲೇ ಬಾಕಿಯಾದ ಮಂಗಳೂರು-ಬೆಂಗಳೂರು ರೈಲು; ಆತಂಕದಲ್ಲಿ ಪೊಲೀಸ್ ಪರೀಕ್ಷಾರ್ಥಿಗಳು!

ಪುತ್ತೂರು: ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿರುವ ಕಾರಣ ಕೋಝಿಕೋಡ್‌(Kozikode)-ಮಂಗಳೂರು(Mangalore)-ಬೆಂಗಳೂರು(Bangalore) ಎಕ್ಸ್‌ಪ್ರೆಸ್‌(Express) ರಾತ್ರಿ ರೈಲು(ಸಂಖ್ಯೆ 16512) ಮಧ್ಯರಾತ್ರಿಯಾದರೂ ಪುತ್ತೂರು ನಿಲ್ದಾಣದಲ್ಲೇ ನಿಂತುಕೊಂಡಿದೆ. ಹಳಿಯ ಮೇಲೆ ಕಲ್ಲು-ಮಣ್ಣು ಕುಸಿದು ಬಿದ್ದಿರುವ ಕಾರಣ ಈ ರೈಲು ಸುಮಾರು ಮೂರುವರೆ ತಾಸಿನಿಂದ ಪುತ್ತೂರು ನಿಲ್ದಾಣದಲ್ಲೇ ಬಾಕಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯಕ್ಕೆ ಈ ರೈಲಿನ ಸಂಚಾರವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಕೇರಳದ ಕಡೆಯಿಂದ ಮಂಗಳೂರು ಮಾರ್ಗವಾಗಿ ಬಂದಿರುವ ಈ ರೈಲು(Train) ಸುಮಾರು ಒಂದು ತಾಸು ತಡವಾಗಿ(Delay) ಕಬಕ-ಪುತ್ತೂರು(Putturu) ರೈಲು ನಿಲ್ದಾಣಕ್ಕೆ ಆಗಮಿಸಿತ್ತು. ಆದರೆ, ರಾತ್ರಿ ಸುಮಾರು 10.20ಕ್ಕೆ ಇಲ್ಲಿಗೆ ಬಂದಿರುವ ಈ ರೈಲು ಮಧ್ಯರಾತ್ರಿ 1.40 ದಾಟಿದರೂ ಪುತ್ತೂರು ನಿಲ್ದಾಣದಲ್ಲೇ ನಿಂತಿರುವುದರಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ಸೇರಿದಂತೆ ಅನೇಕರು ರಾತ್ರಿ ಪೂರ್ತಿ ರೈಲಿನಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಈ ರೈಲು ಪ್ರಯಾಣ ಮುಂದುವರಿಸುವ ಬಗ್ಗೆ ಯಾವುದೇ ನಿರ್ಧಾರ ಅಥವಾ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅದೃಷ್ಟವಶಾತ್‌ ಈ ರೈಲು ಪುತ್ತೂರು ರೈಲು ನಿಲ್ದಾಣದಲ್ಲೇ ಇರುವ ಕಾರಣ ಅಧಿಕಾರಿಗಳು ಕೂಡ ಪರಿಸ್ಥಿತಿ ಬಗ್ಗೆ ಅವಲೋಕಿಸುವುದಕ್ಕೆ ಅನುಕೂಲವಾಗಿದೆ. ಒಂದುವೇಳೆ, ಶಿರಾಡಿ ಘಾಟಿ ಪ್ರದೇಶದಲ್ಲಿ ರೈಲು ಬಾಕಿಯಾಗಿರುತ್ತಿದ್ದರೆ ಮತ್ತಷ್ಟು ತೊಂದರೆ, ಆತಂಕ ಎದುರಾಗುತ್ತಿತ್ತು  ಎಂದು ಪ್ರತ್ಯಕ್ಷದರ್ಶಿಗಳು ಡೇ2ಡೇ ನ್ಯೂಸ್‌ಗೆ ತಿಳಿಸಿದ್ದಾರೆ.

ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆಗೆ ಹೊರಟವರು ಅರ್ಧದಲ್ಲೇ ಬಾಕಿ !   
ಇದೇ ವೇಳೆ ಭಾನುವಾರ ಬೆಳಿಗ್ಗೆ ನಡೆಯಲಿರುವ ಪೊಲೀಸ್(Police) ಕಾನ್‌ಸ್ಟೇಬಲ್‌(Constable) ನೇಮಕಾತಿ ಪರೀಕ್ಷೆಗೆ(Exam) ಬೆಂಗಳೂರಿಗೆ ತೆರಳುತ್ತಿದ್ದ ಬಹುತೇಕ ಪರೀಕ್ಷಾರ್ಥಿಗಳೂ ಇದೇ ರೈಲಿನಲ್ಲಿ ಸಿಲುಕಿಕೊಂಡಿದ್ದಾರೆ. ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಬಹುದೇ ಎಂಬ ಆತಂಕದಲ್ಲಿ ಹಲವು ಅಭ್ಯರ್ಥಿಗಳು ಇದ್ದಾರೆ. ಈ ರೀತಿಯ ಸಮಸ್ಯೆ ಎದುರಾಗಿರುವ ಕಾರಣ ಸರ್ಕಾರ ಹಾಗೂ ರೈಲ್ವೆ ಇಲಾಖೆಯು ಪರೀಕ್ಷೆ ಬರೆಯುವುದಕ್ಕೆ ಅನುಕೂಲವಾಗುವಂತೆ ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸಂಚಾರ ಸುಗಮಗೊಳಿಸಲು ಅಧಿಕಾರಿಗಳ ಪ್ರಯತ್ನ
ರೈಲ್ವೆ ಅಧಿಕಾರಿಗಳು ಮತ್ತು ಸಂಬಂಧಿತ ಸಿಬ್ಬಂದಿಯು ಮಣ್ಣು ಬಿದ್ದಿರುವ ಸ್ಥಳಕ್ಕೆ ತೆರಳಿ ಹಳಿಯ ಮೇಲಿನ ಮಣ್ಣು ಹಾಗೂ ಕಲ್ಲು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ ಎಂಬ ಮಾಹಿತಿಯಿದೆ. ಆದರೆ ನಿರಂತರ ಮಳೆಯ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ಹಳಿಯು ರೈಲುಗಳ ಓಡಾಟಕ್ಕೆ ಸಂಪೂರ್ಣ ಸುರಕ್ಷಿತ ಎಂಬ ಖಚಿತವಾದ ಬಳಿಕವೇ ರೈಲು ಸಂಚಾರ ಪುನರಾರಂಭವಾಗುವ ಸಾಧ್ಯತೆಯಿದೆ.
ಸದ್ಯ ರೈಲಿನಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಸಕಲೇಶಪುರ ಘಾಟ್ ಪ್ರದೇಶದಲ್ಲಿ ವಾಸ್ತವದ ಪರಿಸ್ಥಿತಿ ಏನಾಗಿದೆ ಎನ್ನುವುದು ಗೊತ್ತಾಗಿಲ್ಲ; ರೈಲು ಪ್ರಯಾಣಕ್ಕೆ ಅಡಚಣೆ ಉಂಟಾಗಿದ್ದು, ಇದಕ್ಕಾಗಿ ವಿಷಾದಿಸುವುದಾಗಿ ರೈಲ್ವೆ ಕಡೆಯಿಂದ ಅನೌನ್ಸ್‌ ಮಾಡಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗಿಲ್ಲ. ಹೀಗಾಗಿ, ರೈಲು ಯಾವಾಗ ಮುಂದಕ್ಕೆ ಚಲಿಸಬಹುದು ಎನ್ನುವಂತೆ ನೂರಾರು ಪ್ರಯಾಣಿಕರು ನಿದ್ದೆ ಬಿಟ್ಟು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಪರೀಕ್ಷಾರ್ಥಿಗಳಿಗೆ ರೈಲ್ವೆ ಸಿಬ್ಬಂದಿಯ ತುರ್ತು ಸ್ಪಂದನೆ

ಈ ನಡುವೆ, ಸೋಮವಾರ ನಡೆಯುವ ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆ ಬರೆಯುವ ಹಲವು ಪರೀಕ್ಷಾರ್ಥಿಗಳು  ರೈಲಿನಲ್ಲಿ ಇದ್ದ ಕಾರಣ, ಅವರ ಸಂಕಷ್ಟಕ್ಕೆ ರೈಲ್ವೆ ಸಿಬ್ಬಂದಿಯು ತುರ್ತಾಗಿ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿಗೆ ಅಂಥಹ ಅಭ್ಯರ್ಥಿಗಳನ್ನು ತುರ್ತಾಗಿ ಕರೆದೊಯ್ಯುವುದಕ್ಕೆ ಖಾಸಗಿಯಾಗಿ ಟಿಟಿ ವಾಹನದ ವ್ಯವಸ್ಥೆ ಮಾಡುವ ಮೂಲಕ ಅವರನ್ನೆಲ್ಲ ಬೆಂಗಳೂರಿನತ್ತ ಕಳುಹಿಸುವುದಕ್ಕೂ ವ್ಯವಸ್ಥೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.