ಗುಡ್ಡ ಕುಸಿತ: ಕರಾವಳಿ ಸಂಪರ್ಕ ಕಲ್ಪಿಸುವ 7 ರೈಲುಗಳ ಸಂಚಾರ ಅರ್ಧಕ್ಕೆ ಮೊಟಕು

South Western Railway: ಮೈಸೂರು ವಿಭಾಗದ ಎಡಕುಮೇರಿ-ಶ್ರೀವಾಗಿಲು ನಿಲ್ದಾಣಗಳ ನಡುವೆ ಘಾಟ್ ಮಾರ್ಗದಲ್ಲಿ ಶನಿವಾರ ರಾತ್ರಿ 8:45ರ ಸುಮಾರಿಗೆ ಗುಡ್ಡ ಕುಸಿತವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸಂಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಈ ಬಗ್ಗೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕಾನಮಡಿ ಅವರು ಮಾಹಿತಿ ನೀಡಿದ್ದಾರೆ.

Aug 2, 2026 - 08:47
Aug 2, 2026 - 08:47
ಗುಡ್ಡ ಕುಸಿತ: ಕರಾವಳಿ ಸಂಪರ್ಕ ಕಲ್ಪಿಸುವ 7 ರೈಲುಗಳ ಸಂಚಾರ ಅರ್ಧಕ್ಕೆ ಮೊಟಕು

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಮೈಸೂರು ವಿಭಾಗದ ಎಡಕುಮೇರಿ-ಶ್ರೀವಾಗಿಲು ನಿಲ್ದಾಣಗಳ ನಡುವೆ ಘಾಟ್ ಮಾರ್ಗದಲ್ಲಿ ಶನಿವಾರ ರಾತ್ರಿ 8:45ರ ಸುಮಾರಿಗೆ ಗುಡ್ಡ ಕುಸಿತವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸಂಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

ಈ ಕುರಿತು ನೈಋತ್ಯ ರೈಲ್ವೆ (South Western Railway) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕಾನಮಡಿ ಅವರು ಮಾಹಿತಿ ನೀಡಿದ್ದಾರೆ. 

ಯಾವ ರೈಲುಗಳ ಸಂಚಾರ ಮೊಟಕು:

1) ರೈಲು ಸಂಖ್ಯೆ 16585, ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್: ಆಗಸ್ಟ್ 1ರಂದು ಎಸ್ಎಂವಿಟಿ ಬೆಂಗಳೂರಿನಿಂದ ಹೊರಟಿದ್ದ ಈ ರೈಲು ಮುರುಡೇಶ್ವರದ ಬದಲು ಹಾಸನ ನಿಲ್ದಾಣದಲ್ಲೇ ಸಂಚಾರವನ್ನು ಕೊನೆಗೊಳಿಸಲಿದೆ. ಹಾಸನದಿಂದ ಮುರುಡೇಶ್ವರದ ನಡುವಿನ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ.

2) ರೈಲು ಸಂಖ್ಯೆ 16511, ಕೆಎಸ್ಆರ್ ಬೆಂಗಳೂರು-ಕೋಝಿಕ್ಕೋಡ್ ಎಕ್ಸ್‌ಪ್ರೆಸ್: ಆಗಸ್ಟ್ 1ರಂದು ಕೆಎಸ್ಆರ್ ಬೆಂಗಳೂರಿನಿಂದ ಸಂಚಾರ ಆರಂಭಿಸಿದ್ದ ಈ ರೈಲನ್ನು ಕೋಝಿಕ್ಕೋಡ್ ಬದಲಿಗೆ ಹಾಸನದಲ್ಲೇ ನಿಲ್ಲಿಸಲಾಗಿದೆ. 

3) ರೈಲು ಸಂಖ್ಯೆ 17377, ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್: ವಿಜಯಪುರದಿಂದ ಆಗಸ್ಟ್ 1ರಂದು ಹೊರಟ ಈ ರೈಲು ಮಂಗಳೂರು ಸೆಂಟ್ರಲ್ ಬದಲು ಹಾಸನದವರೆಗೆ ಮಾತ್ರ ಸಂಚರಿಸಲಿದೆ.  

4) ರೈಲು ಸಂಖ್ಯೆ 16595, ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್: ಕೆಎಸ್ಆರ್ ಬೆಂಗಳೂರಿನಿಂದ ಸಂಚಾರಿಸುವ ಈ ರೈಲು, ಕಾರವಾರದ ಬದಲಿಗೆ ಸಕಲೇಶಪುರ ನಿಲ್ದಾಣದಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. 

5) ರೈಲು ಸಂಖ್ಯೆ 16586, ಮುರುಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್: ಮುರುಡೇಶ್ವರದಿಂದ ಹೊರಟಿದ್ದ ಈ ರೈಲು, ಎಸ್ಎಂವಿಟಿ ಬೆಂಗಳೂರಿನ ಬದಲು ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ. 

6) ರೈಲು ಸಂಖ್ಯೆ 16512, ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್: ಕೋಝಿಕ್ಕೋಡ್‌ನಿಂದ ಸಂಚಾರ ಆರಂಭಿಸಿದ್ದ ಈ ರೈಲನ್ನು ಕೆಎಸ್ಆರ್ ಬೆಂಗಳೂರು ಬದಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. 

7) ರೈಲು ಸಂಖ್ಯೆ 17378, ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್: ಮಂಗಳೂರು ಸೆಂಟ್ರಲ್‌ನಿಂದ ಹೊರಟ ಈ ರೈಲು, ವಿಜಯಪುರದ ಬದಲು ಸುಬ್ರಹ್ಮಣ್ಯ ರೋಡ್‌ನಲ್ಲಿ ತನ್ನ ಸಂಚಾರವನ್ನು ಅಂತ್ಯಗೊಳಿಸಲಿದೆ.
 
ನಿರಂತರವಾಗಿ ಗುಡ್ಡ ಕುಸಿತವಾಗುತ್ತಿದ್ದು, ಭಾರೀ ಮಳೆಯಿಂದಾಗಿ ಪುನರ್ ನಿರ್ಮಾಣ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಆದರೂ, ರೈಲ್ವೆ ಇಲಾಖೆ ಹೆಚ್ಚುವರಿ ಹಿಟಾಚಿಗಳನ್ನು ಸ್ಥಳಕ್ಕೆ ರವಾನಿಸಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ನೈಋತ್ಯ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸುರಕ್ಷಿತ ಹಾಗೂ ಶೀಘ್ರ ರೈಲು ಸಂಚಾರ ಪುನರಾರಂಭಕ್ಕೆ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.