ಕ್ಷಣಿಕ ಸುಖಗಳ ತ್ಯಾಗವೇ ಸಾಧನೆಯ ದಾರಿ: ಅವಿನಾಶ್ ಕೊಡಂಕಿರಿ
Puttur: ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ನೀಟ್ ಅಕಾಡೆಮಿಯಲ್ಲಿ ಈಚೆಗೆ ಆಯೋಜಿಸಿದ್ದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಅವಿನಾಶ್ ಕೊಡಂಕಿರಿ ಮಾತನಾಡಿದರು.
ಪುತ್ತೂರು: ಪದವಿಪೂರ್ವ ಶಿಕ್ಷಣದ ಹಂತವು ವಿದ್ಯಾರ್ಥಿಗಳ ಭವಿಷ್ಯದ ದಾರಿಯನ್ನು ನಿರ್ಧರಿಸುವ ಪ್ರಮುಖ ಘಟ್ಟವಾಗಿದೆ. ಈ ಅವಧಿಯಲ್ಲಿ ಎದುರಾಗುವ ನೀಟ್, ಸಿಇಟಿ & ಜೆಇಇಯಂತಹ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಆಳವಾದ ಅಭ್ಯಾಸ ಹಾಗೂ ಸತತ ಪ್ರಯತ್ನ ಅತ್ಯಗತ್ಯ ಎಂದು ಅಂಬಿಕಾ ಪಿಯು ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ 'ಅಂಬಿಕಾ ನೀಟ್ ಅಕಾಡೆಮಿ'ಯಲ್ಲಿ ಈಚೆಗೆ ಆಯೋಜಿಸಿದ್ದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅವಧಿಯಲ್ಲಿ ಮೊಬೈಲ್, ಟಿವಿ, ಕ್ರೀಡೆ ಮತ್ತು ಇತರೆ ಮನೋರಂಜನಾ ಚಟುವಟಿಕೆಗಳಂತಹ ಕ್ಷಣಿಕ ಸುಖಗಳನ್ನು ಬದಿಗಿಟ್ಟು, ಸಂಪೂರ್ಣ ಗಮನವನ್ನು ಓದಿನಲ್ಲಿ ತೊಡಗಿಸಿಕೊಂಡಾಗ ಮಾತ್ರ, ಅತ್ಯುತ್ತಮ ಫಲಿತಾಂಶ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು, ತಮ್ಮಲಿರುವ ಆಸೆಗಳು ಹಾಗೂ ಶಿಕ್ಷಣದ ನಡುವೆ ಗೊಂದಲ ಅನುಭವಿಸುವುದು ಸಹಜ. ಆದರೆ, ಈ ಸಮಯದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು, ಪೋಷಕರು ಹಾಗೂ ಉಪನ್ಯಾಸಕರಿಂದ ಸೂಕ್ತ ಮಾರ್ಗದರ್ಶನ ಪಡೆದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಇದರೊಂದಿಗೆ ಸಮಾಜಕ್ಕೆ ಮಾದರಿಯಾದ ಶ್ರೇಷ್ಠ ನಾಗರಿಕರಾಗಿ ಬೆಳೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಸದುಪಯೋಗದೊಂದಿಗೆ, ಗುಣಮಟ್ಟದ ಶಿಕ್ಷಣ ಕೊಡಲು ಸಂಸ್ಥೆಯಲ್ಲಿ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಶಿಕ್ಷಣ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಪ್ರಗತಿಗೆ ಕೊಡುಗೆ ನೀಡುವಲ್ಲಿ ಮಹಾನ್ ಶಕ್ತಿಯಾಗಿ ಬೆಳೆಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು & ಸಂಯಮ ಅತಿ ಮುಖ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳ ಓದಿಗೆ ಮನೆಯಲ್ಲಿ ಸೂಕ್ತ ವಾತಾವರಣ ನಿರ್ಮಿಸಿಕೊಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 2026ರ ಸಾಲಿನ ನೀಟ್ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ತಾಲೂಕು ವೈದ್ಯಾಧಿಕಾರಿ ಮತ್ತು ರಕ್ಷಕ ಶಿಕ್ಷಕ ಸಂಘದ ಸದಸ್ಯ ಡಾ.ದೀಪಕ್ ರೈ, ಕಾಲೇಜಿನ ಬೋಧಕ ವೃಂದದವರು ಉಪಸ್ಥಿತರಿದ್ದರು.
ಅಂಬಿಕಾ ನೀಟ್ ಅಕಾಡೆಮಿಯ ಪ್ರಾಂಶುಪಾಲ ಕೆ.ಕಿಶೋರ್ ನಿರೂಪಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪಿಯು ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ವಂದನಾರ್ಪಣೆ ಮಾಡಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.