ಉಡುಪಿ: ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ಪರಿಶೀಲನೆ ನಡೆದ ಡಿಸಿಎಂ
Dr.G.Parameshwara: ಉಡುಪಿಯಲ್ಲಿ ಇಂದು ಮಂಗಳೂರು ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡವನ್ನು ಡಾ.ಜಿ.ಪರಮೇಶ್ವರ ಪರಿಶೀಲನೆ ನಡೆಸಿದರು.
ಉಡುಪಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Parameshwara), ಇಂದು ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 'ಸ್ನಾತಕೋತ್ತರ ಅಧ್ಯಯನ ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರ'ದ ಕಟ್ಟಡವನ್ನು ಪರಿಶೀಲಿಸಿದರು.
ಆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸುಮಾರು ರೂ.53.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಕಟ್ಟಡವು ಕೆಲ ವರ್ಷಗಳಿಂದ ಬಳಕೆಯಾಗದೆ ಖಾಲಿ ಬಿದ್ದಿದ್ದು, ದುರಾವಸ್ಥೆಗೆ ತಲುಪುವ ಭೀತಿಯಲ್ಲಿದೆ. ಕಟ್ಟಡ ಹಾಗೂ ಕ್ಯಾಂಪಸ್ ಅನ್ನು ಸೂಕ್ತ ಹಾಗೂ ಸದ್ಬಳಕೆಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಕುರಿತು ಸರ್ಕಾರದ ಹಂತದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
2014-15ನೇ ಸಾಲಿನ ಬಜೆಟ್‌ನಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಕುರಿತು ಘೋಷಣೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ರೂಸಾ (RUSA) ಯೋಜನೆಯಡಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರೂಸಾ ಅನುದಾನದ ಮೂಲಕ, ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಎರಡು ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆ ಇದ್ದು, ಅದರಲ್ಲಿ ಒಂದನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಆಯ್ಕೆ ಮಾಡಲಾಗಿತ್ತು. ವಿಜ್ಞಾನ ಕೇಂದ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ನಕ್ಷೆ ತಯಾರಿಸಿ, ಅಗತ್ಯತೆಗಳ ಬಗ್ಗೆ ಚರ್ಚಿಸಿ, ಅನುಮೋದನೆ ಪಡೆದುಕೊಂಡ ಬಳಿಕ, ಕಾಮಗಾರಿ ಆರಂಭಿಸಲಾಗಿತ್ತು. ಸುಮಾರು ರೂ.50 ರಿಂದ ರೂ.60 ಕೋಟಿ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ ಎಂದರು.
ಕಾರಣಾಂತರಗಳಿಂದ ರೂಸಾ ಕಾರ್ಯಕ್ರಮ ಸ್ಥಗಿತಗೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದಲೂ ಅನುದಾನ ದೊರೆಯದ ಹಿನ್ನೆಲೆ, ವಿಜ್ಞಾನ ಕೇಂದ್ರದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದೀಗ ವಿಜ್ಞಾನ ಕೇಂದ್ರಕ್ಕೆ ಚಾಲನೆ ನೀಡುವ ಕುರಿತು ಪ್ರಸ್ತಾಪ ಮಾಡಲಾಗಿದ್ದು, ಈ ವಿಚಾರ ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ಬಂದಿದೆ ಎಂದು ತಿಳಿಸಿದರು.
ತಾವು ಇಲ್ಲಿಗೆ ಭೇಟಿ ನೀಡಿರುವ ಉದ್ದೇಶಗಳ ಕುರಿತು ಮಾತನಾಡಿ, ರಾಜ್ಯದಲ್ಲಿ 'ಸ್ಪೋರ್ಟ್ಸ್ ಯುನಿವರ್ಸಿಟಿ' ಮಾಡಬೇಕು ಎಂಬ ಚಿಂತನೆಯಿದೆ. ಅದು ಇಲ್ಲಿ ಸಾಧ್ಯವಾಗಬಹುದೇ ಎಂಬುದನ್ನು ಪರಿಶೀಲಿಸಲು ಬಂದಿದ್ದೇನೆ. ಉಡುಪಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಇಲ್ಲ. ಅದಕ್ಕೂ ಸಾಧ್ಯತೆ ಇರಬಹುದೇ ಎಂಬುದನ್ನು ಪರಿಶೀಲಿಸಲು ಬಂದಿದ್ದೇನೆ ಎಂದು ಹೇಳಿದರು.
ಈ ಎಲ್ಲಾ ವಿಚಾರಗಳ ಕುರಿತು ಮಾಹಿತಿ ಪಡೆದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಾರೆ, ಇಲ್ಲಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಅಭಿವೃದ್ಧಿಪಡಿಸಿರುವ ಕ್ಯಾಂಪಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರದ ಹಂತದಲ್ಲಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಡಿಸಿಎಂ ಭೇಟಿ ವೇಳೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಮಂಗಳೂರು ವಿವಿ ರಿಜಿಸ್ಟ್ರಾರ್ ಸಂತೋಷ್ ಬಿ.ಜಗಲಾಸರ್, ಕರ್ನಾಟಕ ಗೃಹ ಮಂಡಳಿ ಎಂಜಿನಿಯರ್ ಸಹನಾ, ಬೆಳಪು ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಗುತ್ತಿಗೆದಾರ ವಾಸುದೇವ್ ಶೆಟ್ಟಿ ಇದ್ದರು.