Indian School of Leadership: ಇಂದು ಇಂಡಿಯನ್ ಸ್ಕೂಲ್ ಆಫ್ ಲೀಡರ್ಶಿಪ್ಗೆ ಯಲಹಂಕದಲ್ಲಿ ಭೂಮಿಪೂಜೆ
Indian School of Leadership: ಇಂದು ಯಲಹಂಕದಲ್ಲಿರುವ 'ಇಂಡಿಯನ್ ಸ್ಕೂಲ್ ಆಫ್ ಲೀಡರ್‌ಶಿಪ್'ಗೆ ಭೂಮಿಪೂಜೆ ನಡೆಯಲಿದೆ.
ಬೆಂಗಳೂರು: ಅಂಕಗಳು & ಪಠ್ಯಪುಸ್ತಕಗಳ ಜೊತೆಗೆ ನಾಯಕತ್ವ, ಮೌಲ್ಯಾಧಾರಿತ ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ನೀಡುವ ಉದ್ದೇಶದಿಂದ ರೂಪುಗೊಂಡಿರುವ ಇಂಡಿಯನ್ ಸ್ಕೂಲ್ ಆಫ್ ಲೀಡರ್ಶಿಪ್ನ (Indian School of Leadership - ISL) ಹೊಸ ಕ್ಯಾಂಪಸ್ ನಿರ್ಮಾಣಕ್ಕೆ, ಯಲಹಂಕದಲ್ಲಿ ಇಂದು (ಸೆ.18) ಮಧ್ಯಾಹ್ನ ಭೂಮಿಪೂಜೆ ನಡೆಯಲಿದೆ.
'ನಾಳಿನ ಭಾರತವನ್ನು ಮುನ್ನಡೆಸುವ ನಾಯಕರನ್ನು ಹೇಗೆ ರೂಪಿಸಬೇಕು?' ಎಂಬ ಪ್ರಶ್ನೆಗೆ ಉತ್ತರವಾಗಿ ಐಸಿಎಲ್ ರೂಪುಗೊಂಡಿದೆ ಎಂದು ಸಂಸ್ಥೆಯ ಸ್ಥಾಪಕರು ತಿಳಿಸಿದ್ದಾರೆ. ಐವರು ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಅನುಭವಿಗಳಾದ ವಿಶ್ವನಾಥ್ ಮೂರ್ತಿ (ವಿಶ್ವ), ಲತಾ ಕೃಷ್ಣ ಮೋಹನ್, ರಾಘವ ಕಶ್ಯಪ, ಹರೀಶ್ ಹಾಗೂ ಶ್ರೀಧರ್ ಸುಬ್ರಮಣಿಯನ್ ಅವರ ಸಹಭಾಗಿತ್ವದಲ್ಲಿ ಸಂಸ್ಥೆ ಬೆಳೆಯುತ್ತಿದೆ.

ಸಾಫ್ಟ್‌ವೇರ್, ಕನ್ಸ್ಟ್ರಕ್ಷನ್, ಡೈರಿ ಮತ್ತು ಆಹಾರ ಉದ್ಯಮಗಳಲ್ಲಿ ಸುಮಾರು 25 ವರ್ಷಗಳ ಅನುಭವ ಹೊಂದಿರುವ , ಇಂಡಿಯಾ ಸ್ವೀಟ್ ಹೌಸ್ ಪ್ರವರ್ತಕರೂ ಆಗಿರುವ ವಿಶ್ವನಾಥ್ ಮೂರ್ತಿ ಅವರು, ಮೌಲ್ಯಾಧಾರಿತ ಉದ್ಯಮಶೀಲತೆಗೆ ಒತ್ತು ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಲತಾ ಕೃಷ್ಣ ಮೋಹನ್ ಅವರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುವ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ.
ಮೈಕ್ರೋಸಾಫ್ಟ್‌ನಲ್ಲಿ ಹಿರಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಬಳಿಕ ಡೀಪ್-ಟೆಕ್ ಹಾಗೂ ಎಐ ಕ್ಷೇತ್ರದಲ್ಲಿ ಉದ್ಯಮ ಕಟ್ಟಿರುವ ರಾಘವ ಕಶ್ಯಪ ಅವರು ಭವಿಷ್ಯದ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಕಟಿಂಗ್ ಎಡ್ಜ್ ಅರ್ಚಿಟೆಕ್ಟ್ಸ್ ಸಂಸ್ಥಾಪಕ ಹರೀಶ್, ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ಕ್ಯಾಂಪಸ್ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ದೊಡ್ಡ ಪ್ರಮಾಣದ ಯೋಜನೆಗಳನ್ನು ಮುನ್ನಡೆಸಿದ ಅನುಭವ ಹೊಂದಿರುವ ಶ್ರೀಧರ್ ಸುಬ್ರಮಣಿಯನ್, ಆಡಳಿತ, ಪಾರದರ್ಶಕತೆ ಹಾಗೂ ವ್ಯವಸ್ಥಿತ ನಿರ್ವಹಣೆಗೆ ಒತ್ತು ನೀಡುತ್ತಿದ್ದಾರೆ.
4 ಪ್ರಮುಖ ಸ್ತಂಭಗಳು:
ಐಸಿಎಲ್ ಶಿಕ್ಷಣ ವ್ಯವಸ್ಥೆಯನ್ನು 4 ಪ್ರಮುಖ ಅಂಶಗಳ ಸುತ್ತ ರೂಪಿಸಲಾಗುತ್ತಿದೆ. ನಾಯಕತ್ವವನ್ನು ಪ್ರತ್ಯೇಕ ವಿಷಯವಾಗಿ, ಕಲಿಸುವ ಬದಲು ವಿದ್ಯಾರ್ಥಿಗಳ ದೈನಂದಿನ ಕಲಿಕೆಯ ಭಾಗವಾಗಿಸುವುದು, ಮೌಲ್ಯಾಧಾರಿತ ಉದ್ಯಮಶೀಲತೆಯನ್ನು ಬೆಳೆಸುವುದು, ಎಐ ಮತ್ತು ರೊಬೋಟಿಕ್ಸ್‌ನಂತಹ ತಂತ್ರಜ್ಞಾನಗಳ ಜೊತೆಗೆ, ಯೋಗ, ಧ್ಯಾನ ಮತ್ತು ಸಹಾನುಭೂತಿಯಂತಹ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವುದು. ಭಾರತೀಯ ಸಾಂಸ್ಕೃತಿಕ ಬೇರುಗಳೊಂದಿಗೆ ಜಾಗತಿಕ ದೃಷ್ಟಿಕೋನ ಬೆಳೆಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
ಯಲಹಂಕದ ಕ್ಯಾಂಪಸ್‌ನಲ್ಲಿ ಸಾಂಪ್ರದಾಯಿಕ ತರಗತಿ ಕೊಠಡಿಗಳ ಜೊತೆಗೆ ಪ್ರಕೃತಿಯ ನಡುವೆ ಕಲಿಕೆ, ತೆರೆದ ಪ್ರಯೋಗಾಲಯಗಳು ಹಾಗೂ ಚರ್ಚಾ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸುವ ಯೋಜನೆಯಿದೆ. ಈಗಾಗಲೇ, ಬನ್ನೆರುಘಟ್ಟ ಕ್ಯಾಂಪಸ್ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ ನಡೆಸುತ್ತಿದೆ.
ಮಕ್ಕಳು ಕೇವಲ ಉದ್ಯೋಗಕ್ಕಾಗಿ ಸಿದ್ಧರಾಗುವುದಕ್ಕಿಂತ, ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ, ತಂಡಗಳನ್ನು ಮುನ್ನಡೆಸುವ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬುದು ಐಸಿಎಎಲ್ ಪರಿಕಲ್ಪನೆಯ ಪ್ರಮುಖ ಆಶಯವಾಗಿದೆ.
'ಭವಿಷ್ಯಕ್ಕಾಗಿ ಮಕ್ಕಳನ್ನು ಸಿದ್ಧಪಡಿಸುವುದಕ್ಕಿಂತ, ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸುವುದು' ಸಂಸ್ಥೆಯ ಶಿಕ್ಷಣದ ಮೂಲ ಆಶಯವಾಗಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.