Vanatvam: ಇಕೋ ಟೂರಿಸಂ ಕೊಡುಗೆ.. ವನತ್ವಂಗೆ FKCCI ಪ್ರವಾಸೋದ್ಯಮ ಪ್ರಶಸ್ತಿ

Vanatvam: ಪರಿಸರ ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವನತ್ವಂ ಪ್ರೈವೇಟ್ ಲಿಮಿಟೆಡ್‌ಗೆ ಹಾಸ್ಪಿಟಾಲಿಟಿ ಮತ್ತು ಟೂರಿಸಂಗೆ 'ಎಫ್‌ಕೆಸಿಸಿಐ ಪ್ರವಾಸೋದ್ಯಮ ಪ್ರಶಸ್ತಿ'ಯನ್ನು ನೀಡಲಾಗಿದೆ.

Sep 19, 2026 - 12:03
Vanatvam: ಇಕೋ ಟೂರಿಸಂ ಕೊಡುಗೆ.. ವನತ್ವಂಗೆ FKCCI ಪ್ರವಾಸೋದ್ಯಮ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ವಾಣಿಜ್ಯ & ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) & ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 'ಪ್ರವಾಸೋದ್ಯಮ ಸಮಾವೇಶ–2026'ರಲ್ಲಿ, ಪರಿಸರ ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವನತ್ವಂ ಪ್ರೈವೇಟ್ ಲಿಮಿಟೆಡ್‌ಗೆ 'ಹಾಸ್ಪಿಟಾಲಿಟಿ ಮತ್ತು ಟೂರಿಸಂ ಅವಾರ್ಡ್' ಪ್ರದಾನ ಮಾಡಲಾಯಿತು.

ವಿಶ್ವ ಪ್ರವಾಸೋದ್ಯಮ ದಿನದ ಪೂರ್ವಭಾವಿ ಕಾರ್ಯಕ್ರಮವಾಗಿ, ಈಚೆಗೆ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಫ್‌ಕೆಸಿಸಿಐಯ ಸರ್.ಎಂ.ವಿ.ಸಭಾಂಗಣದಲ್ಲಿ ಈ ಸಮಾವೇಶ ನಡೆಯಿತು. 

ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿಯನ್ನು ವನತ್ವಂ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ದೀಪಕ್ ಕಸ್ತೂರಿ ಸ್ವೀಕರಿಸಿದರು.

ಸ್ವಂತ ಭೂಮಿಯನ್ನು ಹೊಂದಿರುವ ಪರಿಸರ ಪ್ರಜ್ಞೆಯ ಸಮುದಾಯಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಸುಸ್ಥಿರ ಪರಿಸರ ವ್ಯವಸ್ಥೆ ರೂಪಿಸುವುದು ವನತ್ವಂನ ಪ್ರಮುಖ ಪರಿಕಲ್ಪನೆಯಾಗಿದೆ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಜೀವನಶೈಲಿಯನ್ನು ಉತ್ತೇಜಿಸುವುದರೊಂದಿಗೆ, ಪರಿಸರ ಸ್ನೇಹಿ ಕಾಟೇಜ್‌ಗಳಲ್ಲಿ ಸಮುದಾಯದ ಸದಸ್ಯರಿಗೆ ವಾಸ್ತವ್ಯದ ಅವಕಾಶ ಕಲ್ಪಿಸುವ ಮೂಲಕ ಪ್ರಕೃತಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಪ್ರಯತ್ನವನ್ನು ಸಂಸ್ಥೆ ನಡೆಸುತ್ತಿದೆ.

ವನತ್ವಂ ಸಮುದಾಯದ ಸದಸ್ಯರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯ ಕಳೆಯಲು ಈ ಪರಿಸರ ಸ್ನೇಹಿ ತಾಣಗಳಿಗೆ ನಿಯಮಿತವಾಗಿ ಭೇಟಿ ನೀಡುವ ವ್ಯವಸ್ಥೆಯಿದ್ದು, ಪ್ರವಾಸೋದ್ಯಮದೊಂದಿಗೆ, ಪರಿಸರ ಸಂರಕ್ಷಣೆ ಮತ್ತು ಸಮುದಾಯ ಜೀವನವನ್ನು ಬೆಸೆಯುವ ಮಾದರಿಯನ್ನು ಸಂಸ್ಥೆ ರೂಪಿಸುತ್ತಿದೆ.

ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಎಂ.ಆರ್. ಸೀತಾರಾಮ್, ಎಂಎಲ್‌ಸಿ, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಎಂ.ಎಸ್.ರಾಮಯ್ಯ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಭಾಗವಹಿಸಿದ್ದರು. ಜೆಎಸ್‌ಡಬ್ಲ್ಯು ಸ್ಟೀಲ್, ವಿಜಯನಗರದ ಅಧ್ಯಕ್ಷ ಪಿ.ಕೆ. ಮುರುಗನ್ ಮುಖ್ಯ ಭಾಷಣ ಮಾಡಿದರು.

ಪ್ರವಾಸೋದ್ಯಮದ ಭವಿಷ್ಯದ ಕುರಿತು ಮುಖ್ಯ ಭಾಷಣದೊಂದಿಗೆ ಆರಂಭಗೊಂಡ ಸಮಾವೇಶದಲ್ಲಿ, ಕರ್ನಾಟಕದ ವೈವಿಧ್ಯಮಯ ಪ್ರವಾಸೋದ್ಯಮ ಅನುಭವಗಳ ಕುರಿತು ಮೊದಲ ಅಧಿವೇಶನ ನಡೆಯಿತು. ಪರಂಪರೆ, ಸಾಂಸ್ಕೃತಿಕ, ಪರಿಸರ, ಕರಾವಳಿ, ವೈದ್ಯಕೀಯ ಹಾಗೂ ಗ್ರಾಮೀಣ ಪ್ರವಾಸೋದ್ಯಮದ ಕುರಿತು ಚರ್ಚೆ ನಡೆಯಿತು.

ಎರಡನೇ ಅಧಿವೇಶನದಲ್ಲಿ ವೈದ್ಯಕೀಯ ಪ್ರವಾಸೋದ್ಯಮದ ಮುಂದಿನ ಬೆಳವಣಿಗೆಯ ಅವಕಾಶಗಳು ಕುರಿತು ಚರ್ಚಿಸಲಾಯಿತು. ಆಯುರ್ವೇದ, ಯೋಗ, ನ್ಯಾಚುರೋಪತಿ ಹಾಗೂ ಸ್ವಾಸ್ಥ್ಯ ರೆಸಾರ್ಟ್‌ಗಳ ಸಾಧ್ಯತೆಗಳ ಕುರಿತು ವಿಚಾರ ವಿನಿಮಯ ನಡೆಯಿತು.

ಮೂರನೇ ಅಧಿವೇಶನದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ನಾವೀನ್ಯತೆ ಪ್ರವಾಸೋದ್ಯಮದ ಭವಿಷ್ಯವನ್ನು ಹೇಗೆ ರೂಪಿಸಲಿದೆ ಎಂಬ ವಿಚಾರದ ಕುರಿತು ಚರ್ಚೆ ನಡೆಯಿತು.

ಪರಿಸರ ಸಂರಕ್ಷಣೆ, ಸುಸ್ಥಿರ ಜೀವನಶೈಲಿ ಹಾಗೂ ಪ್ರಕೃತಿ ಆಧಾರಿತ ಪ್ರವಾಸೋದ್ಯಮವನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ದೊರೆತ ಈ ಪ್ರಶಸ್ತಿ ವನತ್ವಂನ ಪರಿಸರ ಪ್ರವಾಸೋದ್ಯಮ ಪರಿಕಲ್ಪನೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.