ನಾಗರಿಕ ಸೇವೆಗಳ ಸುಧಾರಣೆಗಾಗಿ ಕೃತಕ ಬುದ್ಧಿಮತ್ತೆಗೆ ಒತ್ತು: ಪ್ರಿಯಾಂಕ್ ಖರ್ಗೆ
Priyank Kharge: ಅತ್ಯಾಧುನಿಕ ಧ್ವನಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಕೃತಕ ಬುದ್ಧಿಮತ್ತೆ ಸಂಸ್ಥೆ 'ಇಲೆವನ್ ಲ್ಯಾಬ್ಸ್' ನಿಯೋಗದೊಂದಿಗೆ, ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು (ಬುಧವಾರ) ಸಭೆ ನಡೆಸಿದರು.
ಬೆಂಗಳೂರು: ಅತ್ಯಾಧುನಿಕ ಧ್ವನಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಕೃತಕ ಬುದ್ಧಿಮತ್ತೆ ಸಂಸ್ಥೆ 'ಇಲೆವನ್ ಲ್ಯಾಬ್ಸ್' ನಿಯೋಗದೊಂದಿಗೆ, ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು (ಬುಧವಾರ) ಸಭೆ ನಡೆಸಿದರು.
ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಧ್ವನಿ ರೂಪಾಂತರ ತಂತ್ರಜ್ಞಾನ, ಬಹುಭಾಷಾ ಧ್ವನಿ ಸೇವೆಗಳು ಮತ್ತು ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಯೊಂದಿಗೆ ರಾಜ್ಯದಲ್ಲಿ ನಾಗರಿಕ ಸೇವೆಗಳ ವಿತರಣೆಯನ್ನು ಇನ್ನಷ್ಟು ಸುಲಭಗೊಳಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವುದು. ಸರ್ಕಾರದೊಂದಿಗೆ ನಾಗರಿಕರ ಸಂವಹನವನ್ನು ಮತ್ತಷ್ಟು ಸರಳಗೊಳಿಸುವುದು. ಜೊತೆಗೆ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿರುವ ವಿಳಂಬ ಹಾಗೂ ತಾಂತ್ರಿಕ ಅಡೆತಡೆಗಳನ್ನು ನಿವಾರಿಸುವಲ್ಲಿ ಈ ತಂತ್ರಜ್ಞಾನಗಳ ಬಳಕೆಯ ಸಾಧ್ಯತೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ಸಚಿವರು ಮಾತನಾಡಿ, 'ಕರ್ನಾಟಕ ಸರ್ಕಾರ ನಾಗರಿಕ ಕೇಂದ್ರಿತ, ತಂತ್ರಜ್ಞಾನ ಆಧಾರಿತ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧವಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ತಂತ್ರಜ್ಞಾನಗಳು ಸರ್ಕಾರಿ ಸೇವೆಗಳನ್ನು ಜನಸ್ನೇಹಿಯಾಗಿಸಲಿದ್ದು, ವಿವಿಧ ಭಾಷೆಗಳನ್ನು ಮಾತನಾಡುವ ನಾಗರಿಕರಿಗೂ ಸೇವೆಗಳನ್ನು ಸುಲಭವಾಗಿ ತಲುಪಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ನಿಟ್ಟಿನಲ್ಲಿ ಇಂತಹ ನವೋದ್ಯಮಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಕುರಿತು ನಾವು ಪರಾಮರ್ಶಿಸುತ್ತಿದ್ದೇವೆ' ಎಂದು ಹೇಳಿದರು.
'ಇಲೆವನ್ ಲ್ಯಾಬ್ಸ್‌ನಂತಹ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳೊಂದಿಗೆ, ನಿರಂತರ ಸಹಯೋಗದ ಮೂಲಕ ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು. ತಂತ್ರಜ್ಞಾನವನ್ನು ಜನೋಪಯೋಗಿ ಸಾಧನವನ್ನಾಗಿ ರೂಪಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ. ಕರ್ನಾಟಕದ ಜನರಿಗೆ ಅರ್ಥಪೂರ್ಣ, ಸುಲಭ ಮತ್ತು ಪರಿಣಾಮಕಾರಿ ಸೇವೆ ತಲುಪಿಸಲು ಇಂತಹ ಸಹಭಾಗಿತ್ವಗಳು ಮಹತ್ವದ ಪಾತ್ರ ವಹಿಸಲಿವೆ' ಎಂದು ಸಚಿವರು ತಿಳಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.