ಹತ್ತಾರು ಶಿಶುಗಳನ್ನು ರಕ್ಷಿಸಿದ ವ್ಯಕ್ತಿಗೆ ತನ್ನ ಅವಳಿ ಮಕ್ಕಳನ್ನು ಉಳಿಸಿಕೊಳ್ಳಲಾಗಲಿಲ್ಲ

ಝಾನ್ಸಿಯ ಮಕ್ಕಳ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು, ನೋಡನೋಡುತ್ತಾ ಇಡೀ ಆಸ್ಪತ್ರೆಯನ್ನೇ ಆವರಿಸಿತ್ತು. ವ್ಯಕ್ತಿಯೊಬ್ಬ ದೇವರಂತೆ ಬಂದು ಹತ್ತಾರು ಶಿಶುಗಳನ್ನು ರಕ್ಷಣೆ ಮಾಡಿದ್ದಾರೆ, ಆದರೆ ದುರಾದೃಷ್ಟವೆಂದರೆ ಅವರ ಅವಳಿ ಹೆಣ್ಣುಮಕ್ಕಳನ್ನೇ ಉಳಿಸಿಕೊಳ್ಳಲಾಗಲಿಲ್ಲ.

Nov 18, 2024 - 11:50
ಹತ್ತಾರು ಶಿಶುಗಳನ್ನು ರಕ್ಷಿಸಿದ ವ್ಯಕ್ತಿಗೆ ತನ್ನ ಅವಳಿ ಮಕ್ಕಳನ್ನು ಉಳಿಸಿಕೊಳ್ಳಲಾಗಲಿಲ್ಲ
A man who saved dozens of babies couldn't save his twins

ಉತ್ತರ ಪ್ರದೇಶ: ಝಾನ್ಸಿಯ ಮಕ್ಕಳ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು, ನೋಡನೋಡುತ್ತಾ ಇಡೀ ಆಸ್ಪತ್ರೆಯನ್ನೇ ಆವರಿಸಿತ್ತು. ವ್ಯಕ್ತಿಯೊಬ್ಬ ದೇವರಂತೆ ಬಂದು ಹತ್ತಾರು ಶಿಶುಗಳನ್ನು ರಕ್ಷಣೆ ಮಾಡಿದ್ದಾರೆ, ಆದರೆ ದುರಾದೃಷ್ಟವೆಂದರೆ ಅವರ ಅವಳಿ ಹೆಣ್ಣುಮಕ್ಕಳನ್ನೇ ಉಳಿಸಿಕೊಳ್ಳಲಾಗಲಿಲ್ಲ.ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 10 ನವಜಾತ ಶಿಶುಗಳು ಸಾವನ್ನಪ್ಪಿವೆ. ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲೆಡೆ ಶೋಕ ಮಡುಗಟ್ಟಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಆಸ್ಪತ್ರೆಯಲ್ಲಿ ನೂಕುನುಗ್ಗಲು ಉಂಟಾಯಿತು.

ಮನ್ಸೂರಿ ಮತ್ತು ಅವರ ಪತ್ನಿ ನಜ್ಮಾ ಅವಳಿ ಮಕ್ಕಳ ಮೇಲೆ ನಿಗಾ ಇಡಲು ಒಬ್ಬರಾದ ಮೇಲೊಬ್ಬರು ಅಲ್ಲಿರುತ್ತಿದ್ದರು. ನವೆಂಬರ್ 15 ರ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಅವರು ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ತೀವ್ರ ನಿಗಾ ಘಟಕದ (NICU) ಹೊರಗೆ ಮಲಗಿದ್ದರು.ಬೆಂಕಿ ಹೊತ್ತಿಕೊಂಡಾಗ ಕಿಟಕಿಯನ್ನು ಒಡೆದು ಕೊಠಡಿಗೆ ಧಾವಿಸಿದರು ಮತ್ತು ಸಾಧ್ಯವಾದಷ್ಟು ಶಿಶುಗಳನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಸ್ವಂತ ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಯಾಕುಂ ಮನ್ಸೂರಿ ಅಲ್ಲೇ ಮಲಗಿದ್ದರು, ಇದಾದ ಬಳಿಕ ಶಬ್ದ ಕೇಳಿ ಕಿಟಕಿ ಒಡೆದು ಒಳ ನುಗ್ಗಿ ಹಲವು ಮಕ್ಕಳನ್ನು ಹೊರತೆಗೆದಿದ್ದಾರೆ. ಆದರೆ ಮನ್ಸೂರಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಉಳಿಸುವಲ್ಲಿ ವಿಫಲರಾದರು.ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. 11 ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದ ಸಂತೋಷಿ ಎಂಬ ಮಹಿಳೆ, ಬೆಂಕಿ ಹೊತ್ತಿಕೊಂಡಾಗ ಓಡಿ ಬಂದಿದ್ದೇನೆ, ಆದರೆ ಏನಾಗುತ್ತಿದೆ ಎಂದು ಯಾರೂ ಹೇಳಲಿಲ್ಲ ಮತ್ತು ತನಗೂ ತನ್ನ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನನ್ನ ಕಣ್ಣುಗಳ ಮುಂದೆ ನನ್ನ ಮಗು ಸುಟ್ಟು ಸತ್ತುಹೋಯಿತು ಮತ್ತು ನಾನು ಅಸಹಾಯಕತೆಯಿಂದ ನೋಡುತ್ತಿದ್ದೆ. ಆಸ್ಪತ್ರೆಯ ನಿರ್ಲಕ್ಷ್ಯ ನನ್ನ ಕನಸುಗಳನ್ನು ನಾಶ ಮಾಡಿದೆ ಎಂದು ಸಂಜನಾ ಎಂಬುವವರು ಹೇಳಿದ್ದಾರೆ.ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ ಮತ್ತು ಘಟನೆಯ ಬಗ್ಗೆ ಮೂರು ಹಂತದ ತನಿಖೆಗೆ ಆದೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ದುರಂತ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.