ಮಾಜಿ ಶಾಸಕ ಮೊಹಿದ್ದೀನ್‌ ಬಾವ ಸಹೋದರ ಮೃತದೇಹ ಕುಳೂರು ಸೇತುವೆ ಬಳಿ ಪತ್ತೆ

ಸಾವಿನ ಹಿಂದೆ ಹನಿಟ್ರ್ಯಾಪ್‌ ಜಾಲದ ಕೈವಾಡ ಶಂಕೆ; 6 ಮಂದಿ ವಿರುದ್ಧ ಎಫ್‌ಐಆರ್‌

Oct 7, 2024 - 06:33
ಮಾಜಿ ಶಾಸಕ ಮೊಹಿದ್ದೀನ್‌ ಬಾವ ಸಹೋದರ ಮೃತದೇಹ ಕುಳೂರು ಸೇತುವೆ ಬಳಿ ಪತ್ತೆ

ಮಾಜಿ ಶಾಸಕ ಮೊಹಿದ್ದೀನ್‌ ಬಾವ ಸಹೋದರ ಮೃತದೇಹ ಕುಳೂರು ಸೇತುವೆ ಬಳಿ ಪತ್ತೆ
ಸಾವಿನ ಹಿಂದೆ ಹನಿಟ್ರ್ಯಾಪ್‌ ಜಾಲದ ಕೈವಾಡ ಶಂಕೆ; 6 ಮಂದಿ ವಿರುದ್ಧ ಎಫ್‌ಐಆರ್‌

ಮಂಗಳೂರು: ಮಾಜಿ ಶಾಸಕ ಮೊಹಿದ್ದೀನ್‌ ಬಾವ ಅವರ ಸಹೋದರ ಮಮ್ತಾಜ್‌ ಅಲಿ ಅವರ ಮೃತದೇಹ ಕುಳೂರು ಸೇತುವೆ ಕೆಳಭಾಗದಲ್ಲಿ ಪಲ್ಗುಣಿ ನದಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.
ಪೊಲೀಸರು ಸದ್ಯ ಮೃತದೇಹವನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. 


 ಈ ನಡುವೆ ಉದ್ಯಮಿಯೂ ಆಗಿರುವ ಅಲಿ ಅವರನ್ನು ನಿರಂತರ ಬೆದರಿಸಿ ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುವ ಜತೆಗೆ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಿರುವ ಆರೋಪದಡಿ ಮಹಿಳೆ ಸೇರಿದಂತೆ 6 ಮಂದಿ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹೀಗಾಗಿ, ಮಮ್ತಾಜ್‌ ಅಲಿ ಅವರ ಈ ಸಾವಿನ ಪ್ರಕರಣ ಈಗ ಮೇಜರ್‌ ಟ್ವಿಸ್ಟ್‌ ಪಡೆದುಕೊಂಡಿದೆ. ಮೇಲ್ನೋಟಕ್ಕೆ ಮಮ್ತಾಜ್‌ ಅಲಿ ಅವರು ಬ್ಲ್ಯಾಕ್‌ಮೇಲ್‌ಗೆ ಹೆದರಿ ನದಿಗೆ ಹಾರಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ.


ಮಮ್ತಾಜ್‌ ಅಲಿ ಅವರು ನಿನ್ನೆ ಮುಂಜಾನೆ ಮನೆಯಿಂದ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ತೆರಳಿದ್ದು, ದಾರಿ ಮಧ್ಯೆ ಸ್ನೇಹಿತರೊಬ್ಬರಿಗೆ ವಾಯ್ಸ್‌ ಮೆಸೇಜ್‌ ಮಾಡಿ, ನಾನು ಇನ್ನು ಬದುಕುವುದಿಲ್ಲ; ದೇವರ ಬಳಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಈ ನಡುವೆ ಅವರ ಐಷಾರಾಮಿ ಕಾರು ಕೂಡ ಅಪಘಾತವಾದ ರೀತಿಯಲ್ಲಿ ಕುಳೂರು ಸೇತುವೆ ಬಳಿ ಪತ್ತೆಯಾಗಿತ್ತು. ಸಹೋದರ ನಾಪತ್ತೆ ವಿಚಾರ ತಿಳಿದು ಮೊಹಿದ್ದೀನ್‌ ಬಾವ ಸೇರಿದಂತೆ ಕುಟುಂಬಸ್ಥರು ಕೂಡ ಬೆಳಗ್ಗೆಯೇ ಕುಳೂರು ಸೇತುವೆ ಬಳಿ ಜಮಾಯಿಸಿದ್ದರು. ಹೆದ್ದಾರಿಯಾಗಿರುವ ಕಾರಣ ಜನರು ಕೂಡ ಉದ್ಯಮಿಯ ನಾಪತ್ತೆ ವಿಚಾರ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ಬಂದಿದ್ದ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಅವರು ಕೂಡ ಮಮ್ತಾಜ್‌ ಅಲಿ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆಯನ್ನು ವ್ಯಕ್ತಪಡಿಸಿದ್ದರು.
ಅದರಂತೆ, ಪೊಲೀಸರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ, ಕೋಸ್ಟ್‌ಗಾರ್ಡ್‌ ಹಾಗೂ ಮಲ್ಪೆಯ ಮುಳುಗುತಜ್ಞ ಈಶ್ವರ್‌ ಮಲ್ಪೆ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಸಂಜೆವರೆಗೆ ಫಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ಸ್ಕೂಬಾ ಡೈವರ್‌ಗಳ ತಂಡದಿಂದಲೂ ರಾತ್ರಿವರೆಗೆ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.


ಇಂದು ಬೆಳಗ್ಗೆ ಮತ್ತೆ ಶೋಧಾ ಕಾರ್ಯಾಚರಣೆಯನ್ನು ಮುಂದುವರಿಸಿದ ವೇಳೆ, ಕುಳೂರು ಸೇತುವೆ ಕೆಳಭಾಗದಲ್ಲೇ ನದಿಯಲ್ಲಿ ಮಮ್ತಾಜ್‌ ಅಲಿ ಅವರ ಮೃತದೇಹವು ಪತ್ತೆಯಾಗಿದೆ. ಆದರೆ, ಯಾವ ಕಾರಣಕ್ಕೆ ಮಮ್ತಾಜ್‌ ಅವರು ಸಾವಿಗೆ ಶರಣಾಗಿದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಲಿ ಅವರನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅತ್ತ ಮೊಹಿದ್ದೀನ್‌ ಬಾವ ಅವರು ಕೂಡ ತಮ್ಮ ಸಹೋದರ ಸಾವಿಗೆ ಕಾರಣವಾದವರಿಗೆ ಗಲ್ಲುಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.