ಅನರ್ಹರ ಬಳಿ 14 ಲಕ್ಷ ಪಡಿತರ ಕಾರ್ಡ್
ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಅನರ್ಹರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಕಾರ, ಅಧಿಕಾರಿಗಳು 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 3.64 ಲಕ್ಷ ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಕಾರ್ಡ್ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಅಹರ್ನತೆಗೆ ಮಾನದಂಡವೇನು?
6 ತಿಂಗಳವರೆಗೆ ಪಡಿತರ ಪಡೆಯದಿರುವವರು, ಒಂದು ವರ್ಷದವರೆಗೆ ನೇರ ನಗದು ವರ್ಗಾವಣೆ ಸೌಲಭ್ಯ ಪಡೆಯದಿರುವವರು ಮತ್ತು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರನ್ನು ಅನರ್ಹರೆಂದು ಪರಿಗಣಿಸಲಾಗುತ್ತಿದೆ. ಅನರ್ಹ ಪಡಿತರ ಚೀಟಿಗಳ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿರಬಹುದು ಎಂದು ಸಚಿವರು ಅಂದಾಜಿಸಿದ್ದಾರೆ.
ಅನ್ನಭಾಗ್ಯ ಹಣ ವರ್ಗಾವಣೆ ಮುಂದುವರಿಕೆ
ಪ್ರತಿ ಅನ್ನಭಾಗ್ಯ ಫಲಾನುಭವಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ.ಗಳ ನೇರ ನಗದು ವರ್ಗಾವಣೆ (ಡಿಬಿಟಿ) ಮುಂದುವರಿಯಲಿದೆ ಎಂದು ಮುನಿಯಪ್ಪ ತಿಳಿಸಿದರು. ರಾಜ್ಯಕ್ಕೆ ಕೆಜಿ ಅಕ್ಕಿಯನ್ನು 28 ರೂ.ಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದೂ ಅವರು ಹೇಳಿದರು. ಹೆಚ್ಚುವರಿಯಾಗಿ ಅಗತ್ಯವಿರುವ 20,000 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರ ಬೇರೆಡೆಗಳಿಂದ ಸಂಗ್ರಹಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.