ಐದಾರು ವರ್ಷದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಾವಿರ ಹೊಸ ಸ್ಟಾರ್ಟಪ್​ಗಳ ಆರಂಭ

ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಇಂದು ಗುಜರಾತ್​ನ ವಡೋದರಾದಲ್ಲಿ ಸಿ295 ಮಿಲಿಟರಿ ವಿಮಾನ ಘಟಕಕ್ಕೆ ಚಾಲನೆ ನೀಡಿದ್ದಾರೆ.

Oct 28, 2024 - 12:39
ಐದಾರು ವರ್ಷದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಾವಿರ ಹೊಸ ಸ್ಟಾರ್ಟಪ್​ಗಳ ಆರಂಭ
Prime Minister Narendra Modi and Spanish Prime Minister Pedro Sanchez

ವಡೋದರಾ: ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳ ಪರಿಣಾಮವಾಗಿ ಭಾರತದಲ್ಲಿ ರಕ್ಷಣಾ ಕ್ಷೇತ್ರ ಹುಲುಸಾಗಿ ಬೆಳೆಯುತ್ತಿದೆ. ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚುತ್ತಿದೆ. ಕಳೆದ ಐದಾರು ವರ್ಷದಲ್ಲಿ 1,000 ಹೊಸ ಸ್ಟಾರ್ಟಪ್​ಗಳು ಆರಂಭವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್​ನ ವಡೋದರಾ ನಗರದಲ್ಲಿ ಟಾಟಾ ಏರ್​ಕ್ರಾಫ್ಟ್ ಕಾಂಪ್ಲೆಕ್ಸ್​ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ, ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.‘ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಪ್ರೈವೇಟ್ ಸೆಕ್ಟರ್​ನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ್ದೇವೆ. ಖಾಸಗಿ ವಲಯ ಹೆಚ್ಚು ಕ್ಷಮತೆ ಹೊಂದಿರುವಂತೆ ನೋಡಿಕೊಳ್ಳಲಾಗಿದೆ. ಆರ್ಡ್ನೆನ್ಸ್ ಫ್ಯಾಕ್ಟರಿಗಳನ್ನು (ದೇಶೀಯವಾಗಿ ಮಿಲಿಟರಿ ಉತ್ಪನ್ನಗಳನ್ನು ತಯಾರಿಸುವ ಘಟಕ) ಏಳು ದೊಡ್ಡ ಕಂಪನಿಗಳಾಗಿ ರೂಪಿಸಲಾಗಿದೆ. ಡಿಆರ್​ಡಿಎ ಮತ್ತು ಎಚ್​ಎಎಲ್​ಗೆ ಹೆಚ್ಚು ಶಕ್ತಿ ತುಂಬಿದ್ದೇವೆ. ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಎರಡು ದೊಡ್ಡ ಡಿಫೆನ್ಸ್ ಕಾರಿಡಾರ್​ಗಳನ್ನು ಸ್ಥಾಪಿಸಿದ್ದೇವೆ,’ ಎಂದು ಪ್ರಧಾನಿಗಳು ಮಾಹಿತಿ ನೀಡಿದ್ದಾರೆ.

ಟಾಟಾ ಏರ್​ಕ್ರಾಫ್ಟ್ ಕಾಂಪ್ಲೆಕ್ಸ್​ನಲ್ಲಿ ಏರ್​ಬಸ್​ನ ಸಿ-295 ಯುದ್ಧವಿಮಾನದ ತಯಾರಿಕೆ ನಡೆಯಲಿದೆ. ಏರ್​ಬಸ್ ಸಹಯೋಗದಲ್ಲಿ ಟಾಟಾ ಸಂಸ್ಥೆ 40 ಮಿಲಿಟರಿ ವಿಮಾನಗಳನ್ನು ಇಲ್ಲಿ ಮ್ಯಾನುಫ್ಯಾಕ್ಚರ್ ಮಾಡಲಿದೆ.

ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ನರೇಂದ್ರ ಮೋದಿ ಜಂಟಿಯಾಗಿ ಈ ಘಟಕಕ್ಕೆ ಚಾಲನೆ ನೀಡಿದ್ದಾರೆ.