ಹೈಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಹೈಕೋರ್ಟ್ನಲ್ಲಿ ಇಂದು ಮೊದಲ ಬಾರಿಗೆ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗಲಿಲ್ಲವಾದ ಕಾರಣ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್ನಲ್ಲಿ ಇಂದು (ಅಕ್ಟೋಬರ್ 22) ಮೊದಲ ಬಾರಿಗೆ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ. ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರೇ ಹೈಕೋರ್ಟ್ನಲ್ಲಿಯೂ ವಾದ ಮಂಡಿಸುತ್ತಿದ್ದು, ದರ್ಶನ್ಗೆ ಜಾಮೀನು ಕೊಡಿಸುವ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿರುವ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ಸಿವಿ ನಾಗೇಶ್ ಅವರು ದರ್ಶನ್ ಪರವಾಗಿ ವಾದ ಮಂಡನೆ ಆರಂಭಿಸಿ, ದರ್ಶನ್ಗೆ ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದು, ಅವರನ್ನು ನಿನ್ನೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್ಗೆ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಜಾಮೀನು ಕೋರುತ್ತಿದ್ದೇವೆ ಎಂದು ಹೇಳಿದರು. ಸಿವಿ ನಾಗೇಶ್ ಅವರ ಮಾತು ಆಲಿಸಿ, ಜೈಲಧಿಕಾರಿಗಳಿಂದ ದರ್ಶನ್ರ ಆರೋಗ್ಯ ಸ್ಥಿತಿಯ ವರದಿಯನ್ನು ಕೇಳಿದರು. ಬಳಿಕ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಯ್ತು.
ಅಕ್ಟೋಬರ್ 28ರ ಒಳಗಾಗಿ ಬಳ್ಳಾರಿ ಜೈಲು ಅಧಿಕಾರಿಗಳು ದರ್ಶನ್ರ ಆರೋಗ್ಯ ಸ್ಥಿತಿಯ ಬಗ್ಗೆ ವರದಿಯನ್ನು ಹೈಕೋರ್ಟ್ಗೆ ನೀಡಬೇಕಿದ್ದು, ವರದಿ ಆಧರಿಸಿ ದರ್ಶನ್ಗೆ ಜಾಮೀನು ನೀಡಬೇಕೊ ಇಲ್ಲವೋ ಅಥವಾ ಜೈಲಿನಲ್ಲಿಯೇ ಚಿಕಿತ್ಸೆ ಮುಂದುವರೆಸಬೇಕೋ ಎಂಬುದನ್ನು ನಿಶ್ಚಯ ಮಾಡಲಾಗುತ್ತದೆ.ಈ ಹಿಂದೆ ದರ್ಶನ್ ಬೆಂಗಳೂರಿನ ಜೈಲಿನಲ್ಲಿದ್ದಾಗಲೂ ಸಹ ಜೈಲು ಅಧಿಕಾರಿಗಳು ಆರೋಗ್ಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಆಗ ಜಾಮೀನು ಅರ್ಜಿಗಾಗಿ ಅಲ್ಲದೆ, ದರ್ಶನ್ಗೆ ಮನೆಯಿಂದ ವಿಶೇಷ ಸೌಲಭ್ಯ ಪಡೆಯಲು ಹಾಕಿದ್ದ ಅರ್ಜಿಯ ವಿಚಾರಣೆ ಸಮಯದಲ್ಲಿ ವರದಿ ನೀಡಲಾಗಿತ್ತು. ಆದರೆ ನ್ಯಾಯಾಲಯವು ಆಗಲೂ ಸಹ ವಿಶೇಷ ಸೌಲಭ್ಯವನ್ನು ಪಡೆಯುವಂತಿಲ್ಲ ಎಂದಿತ್ತು.