ಕರಾವಳಿ ಜನರ ನಿದ್ದೆಗೆಡಿಸಿದ್ದ ಚಡ್ಡಿಗ್ಯಾಂಗ್​ನ ಭಯಾನಕ ಸ್ಟೋರಿ ಇಲ್ಲಿದೆ ನೋಡಿ !

ಮಂಗಳೂರು ಸಹಿತ ರಾಜ್ಯದ ಹಲವು ಕಡೆ ದರೋಡೆ ನಡೆಸಿರುವ ಈ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.

Oct 5, 2024 - 12:13
Oct 5, 2024 - 13:07
 10
ಕರಾವಳಿ ಜನರ ನಿದ್ದೆಗೆಡಿಸಿದ್ದ ಚಡ್ಡಿಗ್ಯಾಂಗ್​ನ ಭಯಾನಕ ಸ್ಟೋರಿ ಇಲ್ಲಿದೆ ನೋಡಿ !

ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್​ನ ರೋಚಕ ಕಥೆ
ಮಂಗಳೂರು: ಕಳೆದ ಎರಡು ತಿಂಗಳ ಹಿಂದೆ ಮಂಗಳೂರು ನಗರದಲ್ಲಿ ಸರಣಿ ದರೋಡೆಗಳನ್ನು ನಡೆಸಿದ್ದ ಖತರ್ನಾಕ್ ಚಡ್ಡಿ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ಕೃತ್ಯ ನಡೆದು ಪರಾರಿಯಾಗಿದ್ದ ಕೆಲವೇ ಕೆಲವು ಗಂಟೆಯೊಳಗೆ ಸಕಲೇಶಪುರದ ಬಳಿ ಬಂಧಿಸಿದ್ದರು.  ಆದರೆ, ಮಂಗಳೂರು ಪೊಲೀಸರ ಕೈಯಲ್ಲಿ ಲಾಕ್ ಆದ ಬಳಿಕ ಈ ಗ್ಯಾಂಗ್‌ನ ಸದಸ್ಯರು ತಾವು ಈ ಹಿಂದೆ ಏನೆಲ್ಲ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬುದನ್ನು ಬಾಯಿಬಿಟ್ಟಿದ್ದಾರೆ. ಮಂಗಳೂರು ಸಹಿತ ರಾಜ್ಯದ ಹಲವು ಕಡೆ ದರೋಡೆ ನಡೆಸಿರುವ ಈ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಮೂಲತಃ ಮಧ್ಯಪ್ರದೇಶದ ಗುಣಾ ಜಿಲ್ಲೆಯವರಾದ ಇವರು “ಪಾರ್ದಿ” ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವರು. ಮಂಗಳೂರು ಪೊಲೀಸರು ಇವರ ಮೂಲ ಹುಡುಕಿಕೊಂಡು ಹೋದಾಗ ಮತ್ತಷ್ಟು ಕುತೂಹಲ ಹಾಗೂ ಆಘಾತಕಾರಿ ವಿಚಾರಗಳು ಕೂಡ ಈ ಚಡ್ಡಿಗ್ಯಾಂಗ್‌ನ ಬಗ್ಗೆ ಗೊತ್ತಾಗಿದೆ. ‘ಈ ಗುಣಾ ಊರಿನಲ್ಲಿ 200ಕ್ಕೂ ಹೆಚ್ಚು ಮನೆಗಳ ಸದಸ್ಯರಿಗೆ ಕಳವು, ದರೋಡೆಯೇ ವೃತ್ತಿಯಾಗಿದೆ. ಜೊತೆಗೆ ಸಣ್ಣ ವಯಸ್ಸಿನಲ್ಲೇ ಈ ಗ್ಯಾಂಗ್‌ನ ಮಕ್ಕಳಿಗೆ ಕಳ್ಳತನದ ತರಬೇತಿ ನೀಡಲಾಗುತ್ತದೆ. ಕಳ್ಳತನವನ್ನೇ ವೃತ್ತಿಯಾಗಿಸುವಂತೆ ಮನ‌ಃಪರಿವರ್ತನೆ ಮಾಡಿ ಮಕ್ಕಳಿಗೆ ಕಠಿಣ ರೀತಿಯ ತರಬೇತಿ ನೀಡಿ ಅವರನ್ನು ದೊಡ್ಡ ಮಟ್ಟದ ಕೃತ್ಯಗಳಿಗೆ ತಯಾರು ಮಾಡಲಾಗುತ್ತದೆ.
ಈ ಗ್ಯಾಂಗ್‌ನ ಸದಸ್ಯರು ಕಾಲಿಗೆ ಚಪ್ಪಲಿ ಧರಿಸುವುದಿಲ್ಲ. ಮೈಯಲ್ಲಿ ಕೇವಲ ಚಡ್ಡಿ ಮತ್ತು‌ ಬನಿಯನ್ ಮಾತ್ರ ಇದ್ದು, ತಲೆಗೊಂದು ಟವೆಲ್ ಸುತ್ತಿಕೊಂಡು ರಾತ್ರಿ ವೇಳೆಯಲ್ಲಿ ಒಡಾಡುತ್ತಾರೆ. ಕನಿಷ್ಟ ಬಟ್ಟೆಯಲ್ಲಿದ್ದರೆ ಕಳವು ನಡೆಸುವುದು ಹಾಗೂ ಪರಾರಿಯಾಗುವುದು ಸುಲಭ ಎಂಬ ಪ್ಲ್ಯಾನ್ ಈ ಗ್ಯಾಂಗ್‌ನದ್ದು. ಇನ್ನು ಇವರ ಬಳಿ ಅತ್ಯಾಧುನಿಕ ಹಾಗೂ ಪ್ರಬಲವಾದ ಹೈಡ್ರಾಲಿಕ್ ಕಟ್ಟರ್‌ಗಳಿದ್ದು, ಕನಿಷ್ಠ ಸಲಕರಣೆಗಳನ್ನು ಬಳಸಿ ಮನೆ ದರೋಡೆ ನಡೆಸುತ್ತಾರೆ. ಮಂಗಳೂರಿನಲ್ಲಿ ದರೋಡೆ ಕೃತ್ಯ ನಡೆಸಿದಾಗಲೂ ಇವರ ಚಲನವಲನದ ದೃಶ್ಯಗಳು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಗುಂಪಿನಲ್ಲೇ ದರೋಡೆ ‌ಕೃತ್ಯ ನಡೆಸುವ ಈ ಗ್ಯಾಂಗ್‌ಗೆ ನಗದು ಚಿನ್ನಾಭರಣವೇ ಟಾರ್ಗೆಟ್ ಆಗಿರುತ್ತದೆ.

ಜಾತ್ರೆಗಳಿದ್ದಲ್ಲಿಗೆ ಹೋಗಿ ಟೆಂಟ್ ಹಾಕಿಕೊಂಡು ‌ಕೂರುವ ಈ ಗ್ಯಾಂಗ್ ಬಲೂನ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುತ್ತಾರೆ. ಇದರ ಜೊತೆ ಹಗಲೊತ್ತು ಸೂಕ್ತವಾದ ಮನೆಗಳನ್ನು‌ ಗುರುತಿಸಿ ದರೋಡೆಗೆ ವ್ಯವಸ್ಥಿತ ಪ್ಲ್ಯಾನ್ ಮಾಡುತ್ತಾರೆ. ಒಬ್ಬಂಟಿಯಾಗಿ ವಾಸಿಸುವವರು, ವೃದ್ಧರು ಮಾತ್ರ ಇರುವ ಮನೆಯೇ ಇವರ ಟಾರ್ಗೆಟ್ ಆಗಿದ್ದು, ರಾತ್ರಿ ಹೊತ್ತು ಕಾರ್ಯಾಚರಣೆ ನಡೆಸುತ್ತಾರೆ. ಕದ್ದ ಕೂಡಲೇ ಆ ಪ್ರದೇಶದಿಂದ ಪರಾರಿಯಾಗುವ ತಂಡ, ಪರಾರಿಯಾದ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಉದಾಹರಣೆಯೇ ಬಲು ವಿರಳ.

ಎಲ್ಲಾ ಸಲಕರಣೆಗಳನ್ನು ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಓಡಾಡುವ ತಂಡ, ಒಬ್ಬರ ಹಿಂದೆ ಇನ್ನೊಬ್ಬರಂತೆ ಸಾಲಿನಲ್ಲಿ ಬಂದು ಮನೆಯೊಳಗೆ ನುಗ್ಗುತ್ತದೆ. ಚಡ್ಡಿ ಗ್ಯಾಂಗ್‌ನ ಒಬ್ಬೊಬ್ಬರ ಮೇಲೆ ದೇಶದ ವಿವಿಧ ಕಡೆ ಸಾಕಷ್ಟು ಕೇಸ್ ಇದ್ದು, ಈ ಗ್ಯಾಂಗ್‌ನ ಸದಸ್ಯರಿಗೆ ದರೋಡೆಯೇ ಪ್ರಮುಖ ವೃತ್ತಿಯಾಗಿರುತ್ತದೆ. ಒಟ್ಟಿನಲ್ಲಿ ಈ ತಂಡದ ಇನ್ನಷ್ಟು ಸದಸ್ಯರು ರಾಜ್ಯದಲ್ಲಿ ಇರುವ ಬಗ್ಗೆ ಸಂಶಯವಿದ್ದು, ಚಡ್ಡಿಗ್ಯಾಂಗ್​ನ ಕಳ್ಳಾಟವನ್ನು ಬುಡಸಮೇತ ಕಿತ್ತು ಹಾಕಲು ಮಂಗಳೂರು ಪೊಲೀಸರು ಕೂಡ ಈ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಚಡ್ಡಿ ಗ್ಯಾಂಗ್‌ನ ಕ್ರಿಮಿನಲ್‌ ಚಟುವಟಿಕೆಗಳನ್ನು ಕೊನೆಗೊಳಿಸುವುದಕ್ಕೆ ಮುಂದಾಗಿರುವುದು ಗಮನಾರ್ಹ.