ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ದೀಪಾವಳಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಮೊದಲ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲು ಉತ್ತರ ಪ್ರದೇಶದ ಸರ್ಕಾರ ಸಿದ್ಧತೆ ಆರಂಭಿಸಿದೆ.

Oct 28, 2024 - 11:25
Oct 28, 2024 - 11:25
ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ದೀಪಾವಳಿ
First Diwali

ಲಕ್ನೋ:ದೀಪಾವಳಿಯಂದು ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಹಬ್ಬದ ದಿನದಂದು ವಿಶೇಷ ಪರಿಸರ ಸ್ನೇಹಿ ದೀಪಗಳು ರಾಮ ಮಂದಿರವನ್ನು ಬೆಳಗಿಸಲಿವೆ. ದೇವಾಲಯದ ಕಟ್ಟೆಗಳು ಹಾಗೂ ಕೆತ್ತನೆಯ ಮೇಲೆ ಕಲೆಗಳು ಮತ್ತು ಮಸಿ ಪರಿಣಾಮ ಬೀರುವುದನ್ನು ತಡೆಯಲು ಈ ದೀಪಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ವಿಶೇಷ ಮೇಣದ ದೀಪಗಳನ್ನು ಬಳಸಲಾಗುತ್ತದೆ. ದೀರ್ಘಕಾಲದವರೆಗೆ ಈ ದೀಪಗಳು ಬೆಳಗಲಿವೆ. ಈ ದೀಪೋತ್ಸವದಲ್ಲಿ ಪರಿಸರ ಸಂರಕ್ಷಣೆಯೂ ಪ್ರಮುಖವಾಗಿರಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸಲಿರುವ ರಾಮ ಮಂದಿರ ಸಂಕೀರ್ಣವನ್ನು ಅಲಂಕಾರಕ್ಕಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗಕ್ಕೆ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗಿದೆ. ಬೆಳಕು, ಪ್ರವೇಶ ಕಮಾನು ಅಲಂಕಾರಗಳು ಮತ್ತು ಸಂಪೂರ್ಣ ಶುಚಿಗೊಳಿಸುವಿಕೆಯ ಒಟ್ಟಾರೆ ಮೇಲ್ವಿಚಾರಣೆಯನ್ನು ಬಿಹಾರ ಕೇಡರ್‌ನ ನಿವೃತ್ತ ಐಜಿ ಅಶು ಶುಕ್ಲಾ ಅವರಿಗೆ ವಹಿಸಲಾಗಿದೆ.ಈ ದೀಪಾವಳಿಯಲ್ಲಿ ಅಯೋಧ್ಯೆಯನ್ನು ಕೇವಲ ಧರ್ಮ ಮತ್ತು ನಂಬಿಕೆಯ ಕೇಂದ್ರವನ್ನಾಗಿ ಮಾಡದೆ, ಸ್ವಚ್ಛತೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವನ್ನಾಗಿ ಮಾಡುವ ಗುರಿಯನ್ನು ದೇವಾಲಯದ ಟ್ರಸ್ಟ್ ಹೊಂದಿದೆ. 2,000 ಕ್ಕೂ ಹೆಚ್ಚು ಮೇಲ್ವಿಚಾರಕರು, ಉಸ್ತುವಾರಿಗಳು ಮತ್ತು ಇತರ ಸದಸ್ಯರ ಮಾರ್ಗದರ್ಶನದಲ್ಲಿ 30,000 ಕ್ಕೂ ಹೆಚ್ಚು ಸ್ವಯಂಸೇವಕರು 28 ಲಕ್ಷ ದೀಪಗಳನ್ನು ಸರಯೂ ನದಿಯ ಉದ್ದಕ್ಕೂ 55 ಸಾಲುಗಳಲ್ಲಿ ಅಲಂಕರಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.