ಪಶ್ಚಿಮ ಘಟ್ಟದ ನೀರು ಕುಡಿಯುತ್ತೀರಾ; ಹಾಗಾದರೆ ಇನ್ನುಮುಂದೆ ಹೆಚ್ಚುವರಿ ಟ್ಯಾಕ್ಸ್ ಕಟ್ಟಲು ರೆಡಿಯಾಗಿ!
ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳ ನೀರು ಕುಡಿಯುತ್ತಿರುವ ನಗರಗಳಿಗೆ ಪ್ರತ್ಯೇಕ ಹಸಿರು ಸೆಸ್ ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಚಿಸಿದ್ದಾರೆ. ಈ ಹಸಿರು ಸೆಸ್ ಜಾರಿಗೆ ಬಂದರೆ ರಾಜ್ಯದ ಪ್ರಮುಖ ನಗರಗಳ ಜನತೆ ಕುಡಿಯುವ ನೀರಿಗೂ ಪಶ್ಚಿಮ ಘಟ್ಟದ ಸಂರಕ್ಷಣೆ ಹೆಸರಿನಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ.
![ಪಶ್ಚಿಮ ಘಟ್ಟದ ನೀರು ಕುಡಿಯುತ್ತೀರಾ; ಹಾಗಾದರೆ ಇನ್ನುಮುಂದೆ ಹೆಚ್ಚುವರಿ ಟ್ಯಾಕ್ಸ್ ಕಟ್ಟಲು ರೆಡಿಯಾಗಿ!](https://day2daynews.in/uploads/images/202411/image_870x_6735ab2be971a.jpg)
ಮಂಗಳೂರು: ಕರ್ನಾಟಕ ರಾಜ್ಯದ ಪಾಲಿಗೆ ಪಶ್ಚಿಮ ಘಟ್ಟವು ಬಹುದೊಡ್ಡ ಪ್ರಾಕೃತಿಕ ಸಂಪತ್ತಿನ ತಾಣವಾಗಿದ್ದು, ಇಲ್ಲಿನ ವನ್ಯ ಸಂಪತ್ತನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಆದರೆ, ಅಭಿವೃದ್ಧಿ ಹಾಗೂ ಆಧುನಿಕತೆ ಹೊಡೆತಕ್ಕೆ ಸಿಲುಕಿ ಈಗಾಗಲೇ ಪಶ್ಚಿಮ ಘಟ್ಟ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ನದಿ ಮೂಲಗಳಿಗೆ ಪೆಟ್ಟು ಬಿದ್ದ ಪರಿಣಾಮ ಅಂತರ್ ಜಲ ಕೂಡ ಕುಸಿಯುತ್ತಿದೆ. ಈ ರೀತಿ ಪಶ್ಚಿಮ ಘಟ್ಟದ ಮೇಲಾಗುತ್ತಿರುವ ಹಾನಿಯಿಂದಾಗಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿರುವುದು ವಾಸ್ತವ.
ಹೀಗಿರುವಾಗ, ಇದೀಗ ರಾಜ್ಯ ಸರ್ಕಾರವು ಪಶ್ಚಿಮ ಘಟ್ಟದ ಸಂರಕ್ಷಣೆ ಹೆಸರಿನಲ್ಲಿ ಅದರ ಸಿರಿ-ಸಂಪತ್ತನ್ನು ಬಳಸುತ್ತಿರುವುದಕ್ಕೆ ಕರ ವಸೂಲಿಗೆ ಚಿಂತನೆಯನ್ನು ನಡೆಸಿದೆ. ಅಂದರೆ ಪಶ್ಚಿಮ ಘಟ್ಟದ ನದಿಗಳಿಂದ ನೀರು ಪೂರೈಕೆಯಾಗುತ್ತಿರುವ ನಗರಗಳಿಗೆ ಪ್ರತ್ಯೇಕ ಹಸಿರು ಸೆಸ್ ವಿಧಿಸುವುದಕ್ಕೆ ಅರಣ್ಯ ಇಲಾಖೆಯನ್ನು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಕೂಡ ಪಶ್ಚಿಮ ಘಟ್ಟದಿಂದ ಹುಟ್ಟಿ ಹರಿಯುತ್ತಿರುವ ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವನ್ನು ಅವಲಂಬಿಸಿಕೊಂಡಿದೆ. ಇದು ಜಾರಿಗೆ ಬಂದರೆ ಎತ್ತಿನ ಹೊಳೆ ಯೋಜನೆಯಿಂದ ಕುಡಿಯುವ ನೀರು ಪೂರೈಕೆಯಾಗಲಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯಗಳ ಜನರು ಇನ್ನುಮುಂದೆ ಕಸ ಮತ್ತಿತರ ಸೆಸ್‌ಗಳಂತೆ ಪ್ರತ್ಯೇಕ ಹಸಿರು ಸೆಸ್‌ನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಕಾವೇರಿ ಇರಬಹುದು, ಕಬಿನಿ, ಹೇಮಾವತಿ, ತುಂಗಾ ನದಿಯಿಂದಲೂ ಕುಡಿಯುವ ನೀರು ಬಳಕೆ ಮಾಡುತ್ತಿರುವ ಎಲ್ಲ ನಗರಗಳು ಕೂಡ ಹಸಿರು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಸರ್ಕಾರ ವಿಧಿಸಲು ಉದ್ದೇಶಿಸಿರುವ ಹಸಿರು ಸೆಸ್ ಅಥವಾ ಗ್ರೀನ್ ಟ್ಯಾಕ್ಸ್‌ಗೆ ದಕ್ಷಿಣ ಕನ್ನಡದ ಅದರಲ್ಲಿಯೂ ಮಂಗಳೂರು ನಗರ ಜನತೆಯೂ ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾದ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆಯಿದೆ. ಏಕೆಂದರೆ, ನೇತ್ರಾವತಿ ನದಿಯಿಂದ ಬರುವ ನೀರನ್ನು ತುಂಬೆ ಡ್ಯಾಂ ಮೂಲಕ ಮಂಗಳೂರು ನಗರಕ್ಕೆ ಪ್ರತಿನಿತ್ಯ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೇತ್ರಾವತಿ ಅಥವಾ ಕುಮಾರಧಾರಾ ನದಿಗಳ ಮೂಲ ಕೂಡ ಪಶ್ಚಿಮ ಘಟ್ಟವಾಗಿದೆ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಜನರು ಭವಿಷ್ಯದಲ್ಲಿ ನೀರಿನ ಬಳಕೆ ಹೆಸರಿನಲ್ಲಿ ಸರ್ಕಾರಕ್ಕೆ ಪ್ರತ್ಯೇಕ ಸೆಸ್ ಅನ್ನು ಪಾವತಿಸಬೇಕಾಗುತ್ತದೆ. ಈ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ಜೀವವೈವಿಧ್ಯತೆಯ ತಾಣ ಪಶ್ಚಿಮಘಟ್ಟ ಹಲವು ನದಿಗಳ ಮೂಲವಾಗಿದ್ದು, ಈ ನದಿಗಳ ನೀರು ಪೂರೈಕೆಯಾಗುವ ನಗರಗಳಿಗೆ ಹಸಿರು ಸೆಸ್ ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಶ್ಚಿಮಘಟ್ಟಗಳು ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವೂ ಆಗಿದೆ. ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ಈ ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳು ತುಂಬಿ ಹರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ನದಿಗಳಿಂದ ನಗರ, ಪಟ್ಟಣಗಳಿಗೆ ಪೂರೈಕೆ ಆಗುವ ನೀರಿನ ಬಳಕೆಯ ಬಿಲ್ ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ, ಕಾಪು ನಿಧಿ ಸ್ಥಾಪಿಸಿದರೆ, ಈ ಹಣವನ್ನು ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಸಂರಕ್ಷಿಸಲು ಮತ್ತು ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೂ ಈ ಹಣ ಬಳಸಬಹುದು, ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ನೀರಿನ ಬಿಲ್ ಜೊತೆಯಲ್ಲಿ ಬಳಕೆದಾರರು 2 ಅಥವಾ 3 ರೂ. ಪಾವತಿಸಿದರೆ, ಅವರಲ್ಲಿ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟದ ಮಹತ್ವದ ಅರಿವು ಮೂಡುತ್ತದೆ. ಹೀಗೆ ಸಂಗ್ರಹವಾಗುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.