ಆರ್ ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಕೊಲೆ ಪ್ರಕರಣ: ಸಂಜಯ್ ರಾಯ್ ವಿರುದ್ಧ ಸಿಬಿಐ ಚಾರ್ಜ್ ಶೀಟ್

 ಆರ್ ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಚಾರ್ಜ್ ಶೀಟ್ ಸಲ್ಲಿಸಿದೆ.

Oct 7, 2024 - 10:13
ಆರ್ ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಕೊಲೆ ಪ್ರಕರಣ: ಸಂಜಯ್ ರಾಯ್ ವಿರುದ್ಧ ಸಿಬಿಐ ಚಾರ್ಜ್ ಶೀಟ್

ದೆಹಲಿ : ಆರ್ ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಚಾರ್ಜ್ ಶೀಟ್ ಸಲ್ಲಿಸಿದೆ. ಆಗಸ್ಟ್ 9 ರಂದು ಆಸ್ಪತ್ರೆಯೊಳಗೆ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪವನ್ನು ಸಂಜಯ್ ರಾಯ್ ಮೇಲಿದೆ. ಮಧ್ಯರಾತ್ರಿಯ ನಂತರ ಆಸ್ಪತ್ರೆಯಲ್ಲಿ ತನ್ನ ಸುದೀರ್ಘ ಶಿಫ್ಟ್ ನಡುವೆ ವಿಶ್ರಾಂತಿ ಪಡೆಯಲು ಕೋಣೆಗೆ ಹೋಗಿದ್ದ ವೈದ್ಯೆಯನ್ನು ಆಸ್ಪತ್ರೆಯ ಸೆಮಿನಾರ್ ಕೊಠಡಿಯೊಳಗೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ.ಮರುದಿನ ಬೆಳಗ್ಗೆ ಕಿರಿಯ ವೈದ್ಯರಿಗೆ ಆಕೆಯ ಶವ ಪತ್ತೆಯಾಗಿದೆ.

ಆಕೆಯ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಸಂತ್ರಸ್ತೆಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ. ಆಕೆಯ ಶವಪರೀಕ್ಷೆ ಆಕೆಯ ದೇಹದಲ್ಲಿ 25 ಆಂತರಿಕ ಮತ್ತು ಬಾಹ್ಯ ಗಾಯಗಳು ಪತ್ತೆಯಾಗಿತ್ತು.  ಸಂಜಯ್ ರಾಯ್ ಕೋಲ್ಕತ್ತಾ ಪೊಲೀಸರ ನಾಗರಿಕ ಸ್ವಯಂಸೇವಕರಾಗಿದ್ದು ಆಗಾಗ ಆಸ್ಪತ್ರೆಗೆ ಹೋಗುತ್ತಿದ್ದ.ಸಂಜಯ್ ರಾಯ್ ಆಗಸ್ಟ್ 9 ರಂದು ಮುಂಜಾನೆ 4.03 ಕ್ಕೆ ಸೆಮಿನಾರ್ ಕೊಠಡಿಗೆ ಪ್ರವೇಶಿಸುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಸುಮಾರು ಅರ್ಧ ಗಂಟೆಯ ನಂತರ ಆತ ಕೊಠಡಿಯಿಂದ ಹೊರಬಂದಿದ್ದಾನೆ. ಕೋಲ್ಕತ್ತಾ ಪೊಲೀಸರು ಅಪರಾಧ ನಡೆದ ಸ್ಥಳದಲ್ಲಿ ವ್ಯಕ್ತಿಯ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಸಹ ಪತ್ತೆ ಮಾಡಿದ್ದಾರೆ.

ಪ್ರಕರಣವನ್ನು ಸಿಬಿಐ ವಹಿಸಿಕೊಂಡ ನಂತರ, ರಾಯ್​​ನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು, ಅಲ್ಲಿ ಆತ ನಿರಪರಾಧಿ ಎಂದು ಹೇಳಿದ್ದಾನೆ. ತಾನು ಸೆಮಿನಾರ್ ಹಾಲ್ ಪ್ರವೇಶಿಸಿದಾಗ ಮಹಿಳೆ ಪ್ರಜ್ಞಾಹೀನರಾಗಿದ್ದರು ಎಂದು ಆತ ಹೇಳಿದ್ದಾನೆ.ಘಟನೆಯ ಬಗ್ಗೆ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಕೇಳಿದಾಗ, ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆಯನ್ನು ನೋಡಿದ ನಂತರ ತಾನು ಭಯಭೀತನಾದೆ ಎಂದಿದ್ದಾನೆ ರಾಯ್. ಆದಾಗ್ಯೂ, ರಾಯ್ ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ವರದಿ ಮಾಡಿದೆ. ಸಂಜಯ್ ರಾಯ್ ಕೂಡ ತನ್ನ ವಿರುದ್ಧ ಸಂಚು ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ.ಸಂತ್ರಸ್ತೆಯ ಪೋಷಕರನ್ನು ದಾರಿತಪ್ಪಿಸಲು ಮತ್ತು ಸಾಕ್ಷ್ಯವನ್ನು ತಿರುಚಲು ಯತ್ನಿಸಿದ ಆರೋಪದ ಮೇಲೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿದೆ.