ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ

ಅಮೆರಿಕದ ಆ್ಯಪಲ್ ಸಂಸ್ಥೆ ಭಾರತದಲ್ಲಿ ತನ್ನ ಉತ್ಪನ್ನಗಳ ತಯಾರಿಕೆಯ ಕೆಲಸವನ್ನು ತೀವ್ರಗೊಳಿಸಿದೆ. ಪರಿಣಾಮವಾಗಿ ಚೀನಾದ ಮೇಲಿನ ಅವಲಂಬನೆಯನ್ನು ಆ್ಯಪಲ್ ನಿಧಾನವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ.

Oct 29, 2024 - 12:11
ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ

ನವದೆಹಲಿ: ಅಮೆರಿಕದ ಆ್ಯಪಲ್ ಸಂಸ್ಥೆ ಭಾರತದಲ್ಲಿ ತನ್ನ ಉತ್ಪನ್ನಗಳ ತಯಾರಿಕೆಯ ಕೆಲಸವನ್ನು ತೀವ್ರಗೊಳಿಸಿದೆ. ಪರಿಣಾಮವಾಗಿ ಚೀನಾದ ಮೇಲಿನ ಅವಲಂಬನೆಯನ್ನು ಆ್ಯಪಲ್ ನಿಧಾನವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ. ವರದಿ ಪ್ರಕಾರ, ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅರ್ಧ ವರ್ಷದಲ್ಲಿ 6 ಬಿಲಿಯನ್ ಡಾಲರ್ ಮೌಲ್ಯದ ಮೇಡ್ ಇನ್ ಇಂಡಿಯಾ ಐಫೋನ್​ಗಳನ್ನು ಆ್ಯಪಲ್ ಸಂಸ್ಥೆ ರಫ್ತು ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಮೂರು ಪಟ್ಟು ಹೆಚ್ಚಾಗಿದೆ. ಅಂದರೆ, ಭಾರತದಲ್ಲಿ ಐಫೋನ್ ತಯಾರಿಕೆ ಹೆಚ್ಚುತ್ತಿರುವ ವೇಗ ಬಹಳ ಹೆಚ್ಚಿದೆ. ಅಂದಾಜು ಪ್ರಕಾರ ಈ ಹಣಕಾಸು ವರ್ಷದಲ್ಲಿ ಮೇಡ್ ಇನ್ ಇಂಡಿಯಾ ಐಫೋನ್​ ಗಳ ರಫ್ತು 10 ಬಿಲಿಯನ್ ಡಾಲರ್ ದಾಟಬಹುದು ಎನ್ನಲಾಗಿದೆ.

ಆ್ಯಪಲ್ ಸಂಸ್ಥೆಯ ಉತ್ಪನ್ನಗಳನ್ನು ಭಾರತದಲ್ಲಿ ಮೂರು ಕಂಪನಿಗಳು ತಯಾರಿಸಿಕೊಡುತ್ತವೆ. ಫಾಕ್ಸ್​ಕಾನ್, ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಿಂದ ಐಫೋನ್​ಗಳ ಅಂತಿಮ ಅಸೆಂಬ್ಲಿಂಗ್ ನಡೆಯುತ್ತದೆ. ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ 6 ಬಿಲಿಯನ್ ಡಾಲರ್ ಮೊತ್ತದ ಐಫೋನ್​ಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಉತ್ಪಾದನೆಯನ್ನು ಫಾಕ್ಸ್​ಕಾನ್ ಸಂಸ್ಥೆ ಮಾಡುತ್ತದೆ.ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಿಂದ 1.7 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ರಫ್ತಾಗಿದೆ. ಟಾಟಾ ವೈಶಿಷ್ಟ್ಯತೆ ಎಂದರೆ, ಐಫೋನ್ ಅನ್ನು ತಯಾರಿಸುತ್ತಿರುವ ಮೊದಲ ಹಾಗೂ ಏಕೈಕ ಭಾರತೀಯ ಕಂಪನಿ ಎನಿಸಿದೆ. ಫಾಕ್ಸ್​ಕಾನ್, ಪೆಗಾಟ್ರಾನ್ ಕಂಪನಿಗಳು ತೈವಾನ್ ದೇಶದ ಮೂಲದವಾಗಿವೆ.