ದೀಪಾವಳಿ ಹಬ್ಬ ಮುಗಿಸಿ ಹಿಂದಿರುಗುವವರಿಗೆ ಅನುಕೂಲವಾಗುವಂತೆ ಮಂಗಳೂರು - ಬೆಂಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಮಂಜೂರು
ಹುಬ್ಬಳ್ಳಿ-ಮಂಗಳೂರು(07311/07312) ವಿಶೇಷ ರೈಲು ನ.2(ಶನಿವಾರ)ರಂದು ಸಂಜೆ 4ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ತಲುಪಲಿದೆ ಈ ರೈಲು ಮರುದಿನ ನವೆಂಬರ್ 3 ರಂದು ಮಂಗಳೂರು-ಹುಬ್ಬಳ್ಳಿ(ನಂ.07312) ವಿಶೇಷ ರೈಲು ಮಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ರಾತ್ರಿ 10 ಗಂಟೆಗೆ ಯಶವಂತಪುರ ತಲುಪಲಿದೆ.
ದ.ಕ. ಸಂಸದ ಕ್ಯಾ. ಚೌಟರ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವಾಲಯ
ಮಂಗಳೂರು: ಕರಾವಳಿ ಭಾಗದ ಜನರು ದೀಪಾವಳಿ ಹಬ್ಬ ಮುಗಿಸಿ ಮತ್ತೆ ತಮ್ಮ ಕೆಲಸಕ್ಕೆ ತೆರಳಲು ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮನವಿಗೆ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತುರ್ತು ಸ್ಪಂದಿಸಿದ್ದು, ಇದೀಗ ನೈರುತ್ಯ ರೈಲ್ವೆಯು ಮಂಗಳೂರು - ಬೆಂಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ಮಂಜೂರು ಮಾಡಿದೆ.
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ತಮ್ಮೂರಿಗೆ ಪ್ರಯಾಣಿಸುತ್ತಾರೆ. ಆದರೆ, ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಪ್ರಯಾಣಿಕರ ದಟ್ಟನೆ ಜಾಸ್ತಿಯಾಗಿ ಬಸ್‌ಗಳಲ್ಲಿ ಟಿಕೆಟ್ ಲಭಿಸದೆ ಊರಿಗೆ ಬಂದು ಹೋಗುವುದಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ, ದೀಪಾವಳಿ ಹಬ್ಬಕ್ಕೆ ಕರಾವಳಿ ಭಾಗದ ಜನರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡುವಂತೆ ಸಂಸದ ಕ್ಯಾ. ಚೌಟ ಅವರು ನೈರುತ್ಯ ರೈಲ್ವೆ ವಲಯಕ್ಕೆ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದೀಗ ಅವರ ಮನವಿಗೆ ವಿಶೇಷ ರೈಲು ಸೇವೆ ಮಂಜೂರು ಮಾಡಿದ್ದು, ಈ ತುರ್ತು ಸ್ಪಂದನೆಗೆ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕ್ಯಾ. ಚೌಟ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ನಿನ್ನೆಯ ದಿನ ಸಂಸದ ಕ್ಯಾ. ಚೌಟ ಅವರ ಮನವಿ ಮೇರೆಗೆ ಬೆಂಗಳೂರಿನಿಂದ ಮಂಗಳೂರಿಗೆ ಬರುವವರಿಗೆ ಅಕ್ಟೋಬರ್ 30 ರಂದು ರೈಲ್ವೆ ಇಲಾಖೆಯು ವಿಶೇಷ ರೈಲು ಮಂಜೂರು ಮಾಡಿದ್ದು ಈಗ ಹಬ್ಬ ಮುಗಿಸಿ ಹಿಂದಿರುಗಲು ಕೂಡ ಈ ವಿಶೇಷ ವ್ಯವಸ್ಥೆ ಒದಗಿಸುವ ಮೂಲಕ ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಮೆರುಗನ್ನು ಸಂಸದರು ನೀಡಿರುತ್ತಾರೆ.