ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​, ನೈಜೀರಿಯಾ ಪ್ರಜೆ ವಶಕ್ಕೆ

Jan 21, 2026 - 14:30
ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​, ನೈಜೀರಿಯಾ ಪ್ರಜೆ ವಶಕ್ಕೆ

ಬೆಂಗಳೂರಿನಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ದಾಳಿ ನಡೆಸಿದ್ದು, ನೈಜೀರಿಯಾದ ಪ್ರಜೆಯೊಬ್ಬನನ್ನು ಬಂಧಿಸಿ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಜೊತೆಗೆ 300 ಎಕ್​ಸ್ಟಸಿ ಪಿಲ್ಸ್ ವಶಪಡಿಸಿಕೊಂಡಿದ್ದಾರೆ. ಮಾರತ್ತಹಳ್ಳಿ ಬಳಿಯ ಮುನೆಕೊಳಲುವಿನ ಬಾಡಿಗೆ ಮನೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಅರ್ನೆಸ್ಟ್ ಒನ್ಯೆಕಾಚಿ ಇದ್ದ ಬಾಡಿಗೆ ನಿವಾಸದ ಮೇಲೆ ದಾಳಿ ನಡೆಸಿ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಡುಗೋಡಿ ಮತ್ತು ಹೆಣ್ಣೂರು ಪೊಲೀಸರು ಈ ಹಿಂದೆ ಇದೇ ರೀತಿಯ ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಆತ ಮತ್ತೆ ಡ್ರಗ್ಸ್ ಮಾರಾಟ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೈಕೋ ಯುವಕ

ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗವು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತನಿಗೆ ಎಲ್ಲಿಂದ ಡ್ರಗ್ಸ್​ ಪೂರೈಕೆಯಾಗುತ್ತಿತ್ತು, ಇತರ ಆರೋಪಿಗಳ ಜತೆಗಿನ ಸಂಪರ್ಕ ಇತ್ಯಾದಿ ಎಲ್ಲ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಕಲೆಹಾಕುತ್ತಿದ್ದಾರೆ.