ನಿಯಮಿತವಾಗಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ: ಈಶ್ವರ ಖಂಡ್ರೆ

ಜಲ, ವಾಯು ಕಾಯಿದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಈಶ್ವರ ಖಂಡ್ರೆ ಸೂಚನೆ

Oct 10, 2025 - 16:25
ನಿಯಮಿತವಾಗಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ: ಈಶ್ವರ ಖಂಡ್ರೆ

ಬಳ್ಳಾರಿ : ಜಲ, ವಾಯು, ಶಬ್ದ ಮಾಲಿನ್ಯ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಪರಿಸರ ಸಂರಕ್ಷಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಜಲ ಮತ್ತು ವಾಯು ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.


ಬಳ್ಳಾರಿಯಲ್ಲಿಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ, ಬಹುಮಹಡಿ ಕಟ್ಟಡಗಳ ಸಂಸ್ಕರಿಸದ ಮಲತ್ಯಾಜ್ಯ ಕೆರೆ, ಕಟ್ಟೆ, ನದಿ, ಸರೋವರ ಸೇರುತ್ತಿದ್ದು, ಇದರಿಂದ ಜಲಚರಗಳಷ್ಟೇ ಅಲ್ಲದೆ ಜನ, ಜಾನುವಾರುಗಳೂ ಮೃತಪಡುತ್ತಿರುವುದು ಆತಂಕದ ವಿಷಯವಾಗಿದ್ದು, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಕುಡಿಯುವ ನೀರು ಪೂರೈಸುವ ಜಲ ಮೂಲಗಳಲ್ಲಿ ನೀರಿನ ಗುಣಮಟ್ಟ ಮತ್ತು ಜಲ ಶುದ್ಧೀಕರಣ ಘಟಕಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಬೇಕು ಎಂದು ಹೇಳಿದರು.
ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಮನವಿ:
ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ, ಸುಟ್ಟರೆ ವಿಷಕಾರಿ ಅಂಶವನ್ನು ಗಾಳಿಗೆ ಸೇರಿಸುವ ಏಕ ಬಳಕೆ ಪ್ಲಾಸ್ಟಿಕ್ ಈ ಭೂಗ್ರಹಕ್ಕೆ ಮಾರಕವಾಗಿದ್ದು, ಪ್ರಜ್ಞಾವಂತ ನಾಗರಿಕರು, ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ತ್ಯಜಿಸಬೇಕು, ಸಂತೆ, ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಬಳಸಿದ ತೈಲ, ಇ-ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳ ವೈಜ್ಞಾನಿಕ ಮತ್ತು ಸಮರ್ಪಕ ವಿಲೇವಾರಿ ಆಗಬೇಕು. ಈ ತ್ಯಾಜ್ಯಗಳು ಅತ್ಯಂತ ಅಪಾಯಕಾರಿಯಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಮಂಡಳಿ ಅರಿವು ಮೂಡಿಸಬೇಕು, ನಿಯಂತ್ರಣ ಮಾಡಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಪ್ರಕೃತಿ ಪರಿಸರ ನಾಶವಾದರೆ ಇಡೀ ಮಾನವಕುಲವೇ ನಾಶ:
ಪ್ರಕೃತಿ ಪರಿಸರ ನಾಶವಾದರೆ ಇಡೀ ಮಾನವಕುಲವೇ ನಾಶವಾಗುತ್ತದೆ. ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಮತ್ತು ಮುಂದಿನ ಪೀಳಿಗೆ ಬದುಕಲು ಸಾಧ್ಯ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಪರಿಸರ ಮಾಲಿನ್ಯ ಆಗದಂತೆ ಎಚ್ಚರ ವಹಿಸಬೇಕು. ಮನೆಯ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಜೊತೆಗೆ ಮನೆಯ ಮುಂದೆ ಗಿಡ ನೆಟ್ಟು, ನೀರೆರೆದು ಪೋಷಿಸಿ ಹಸಿರು ವ್ಯಾಪ್ತಿ ಹೆಚ್ಚಿಸಬೇಕು ಎಂದು ತಿಳಿಸಿದರು.
ಕೋವಿಡ್ ಕಾಲದಲ್ಲಿ ಆಮ್ಲಜನಕದ ಮಹತ್ವ ನಮಗೆಲ್ಲರಿಗೂ ತಿಳಿಯಿತು. ಇದನ್ನು ಮನಗಂಡು ತಾವು ಅರಣ್ಯ ಸಚಿವರಾದ ಬಳಿಕ 11 ಕೋಟಿ ಸಸಿಗಳನ್ನು ರಾಜ್ಯಾದ್ಯಂತ ನೆಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಬಳ್ಳಾರಿ ಖನಿಜ ಸಂಪತ್ತಿನಿಂದ  ಕೂಡಿದ ಪ್ರದೇಶವಾಗಿದ್ದು, ಇಲ್ಲಿ ಪರಿಸರ ಸಂರಕ್ಷಣೆಗೆ ಕೆ.ಎಂ.ಇ.ಆರ್.ಸಿ. ನಿಧಿ ಲಭಿಸುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಯೋಜನೆ ರೂಪಿಸಿ ಪ್ರಕೃತಿ ಪರಿಸರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ, ಸಂಸತ್ ಸದಸ್ಯ ತುಕಾರಾಂ ಮತ್ತಿತರರು ಪಾಲ್ಗೊಂಡಿದ್ದರು.