ಆರ್​ಸಿಬಿ ಅಭಿಮಾನಿಗಳಿಗೆ ಡಿಕೆಶಿ ಗುಡ್ ನ್ಯೂಸ್

Dec 12, 2025 - 14:13
ಆರ್​ಸಿಬಿ ಅಭಿಮಾನಿಗಳಿಗೆ ಡಿಕೆಶಿ ಗುಡ್ ನ್ಯೂಸ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಇತರ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿ ಸಚಿವ ಸಂಪುಟ ಈಗಾಗಲೇ ನಿರ್ಧಾರ ಕೈಗೊಂಡಿದೆ. ಕ್ರಿಕೆಟ್ ಪ್ರಿಯರಿಗೆ ಶುಭ ಸುದ್ದಿ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಕ್ರೀಡಾಂಗಣದಲ್ಲಿ ಭವಿಷ್ಯದಲ್ಲಿ ಯಾವುದೇ ಅನಾಹುತಗಳು ಸಂಭವಿಸುವುದನ್ನು ತಡೆಯಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.ಕ್ರೀಡಾಂಗಣದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸಂಬಂಧಪಟ್ಟ ಎಲ್ಲರನ್ನು ಕರೆದು ಮಾತನಾಡಲಿದ್ದಾರೆ. ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ಸಲ್ಲಿಸಿರುವ ಶಿಫಾರಸುಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಎಸ್​​ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದ ತಂಡ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರು ಸಭೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಬೆಂಗಳೂರಿನ ಗೌರವವನ್ನು ಕಾಪಾಡುವುದು ತಮ್ಮ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗೃಹ ಸಚಿವರು ಕೈಗೊಳ್ಳಲಿರುವ ನಿರ್ಧಾರಗಳು ಕ್ರೀಡಾಂಗಣದಲ್ಲಿನ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಭವಿಷ್ಯದ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆಗಳನ್ನು ರೂಪಿಸುವುದನ್ನು ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಭದ್ರತೆ ಒದಗಿಸುವ ಬಗ್ಗೆ ಗೃಹ ಇಲಾಖೆ ಜೊತೆಗೆ ಕೆಎಸ್‌ಸಿಎ ಚರ್ಚಿಸಬೇಕು ಎಂದು ಸಂಪುಟ ಸೂಚನೆ ನೀಡಿದೆ. ಕೆಎಸ್‌ಸಿಎಎಗೆ ಕೆಲವು ಷರತ್ತುಗಳನ್ನು ವಿಧಿಸುವುದಕ್ಕೂ ಸಂಪುಟ ನಿರ್ಧರಿಸಿದೆ. ಗೃಹ ಇಲಾಖೆ ಸೂಚಿಸುವ ಷರತ್ತುಗಳು ಮತ್ತು ನಿಬಂಧನೆಗಳನ್ನು ಅಳವಡಿಸಿಕೊಂಡು ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಬಹುದಾಗಿದೆ.