ಲೋಕಸಭೆಯಲ್ಲಿ ‘G Ram G’ ಮಸೂದೆ ಅಂಗೀಕಾರ

Dec 18, 2025 - 15:28

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಂದು ಲೋಕಸಭೆಯಲ್ಲಿ ವಿಬಿ ಜಿ ರಾಮ್ ಜಿ ಮಸೂದೆಯನ್ನು ಅಂಗೀಕರಿಸಲಾಯಿತು.ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಬದಲಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ ಅಂದರೆ VB-G RAM G ಮಸೂದೆ-2025ಯನ್ನು ಅಂಗೀಕರಿಸಲಾಗಿದೆ.

ಏನಿದು  MGNREGA?

 ಹೊಸ ಮಸೂದೆಯ ಬಗ್ಗೆ ತಿಳಿಯುವ ಮುನ್ನ, ಇಷ್ಟು ವರ್ಷ ನಮ್ಮ ಹಳ್ಳಿಗಳಲ್ಲಿ ಚಾಲ್ತಿಯಲ್ಲಿದ್ದ ಯೋಜನೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ’ ಎನ್ನುವುದು ಭಾರತದ ಗ್ರಾಮೀಣ ಭಾಗದ ಜನರ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಒಂದು ಕ್ರಾಂತಿಕಾರಿ ಯೋಜನೆಯಾಗಿದೆ. ಇದು ದೇಶದ ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಪಡಿಸಿದ ಕೂಲಿ ಉದ್ಯೋಗವನ್ನು ನೀಡುವ ಗುರಿ ಹೊಂದಿದೆ.

ಏನಿದು ಹೊಸ ಮಸೂದೆ?

 ಈಗ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸಿದ್ದಾರೆ. ಇದರ ಪ್ರಮುಖ ಉದ್ದೇಶ ಮೇಲೆ ವಿವರಿಸಿದ 2005ರ ಹಳೆಯ MGNREGA ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ನಿಯಮಗಳೊಂದಿಗೆ ‘VB-G RAM G’ ಕಾಯ್ದೆಯನ್ನು ಜಾರಿಗೆ ತರುವುದಾಗಿದೆ.

ಈ ಯೋಜನೆಯಿಂದ ಯಾರಿಗೆ ಹೆಚ್ಚು ಲಾಭ? ಹೊಸ ಮಸೂದೆಯು ಜಾರಿಯಾದರೆ ಗ್ರಾಮೀಣ ಭಾಗದ ಈ ಕೆಳಗಿನ ವರ್ಗಗಳಿಗೆ ನೇರ ಲಾಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಗ್ರಾಮೀಣ ಕೂಲಿ ಕಾರ್ಮಿಕರು: ವರ್ಷಕ್ಕೆ ಹೆಚ್ಚುವರಿ 25 ದಿನಗಳ ಕೆಲಸ ಸಿಗುವುದರಿಂದ, ಪ್ರತಿ ಕುಟುಂಬದ ವಾರ್ಷಿಕ ಆದಾಯದಲ್ಲಿ ಏರಿಕೆಯಾಗಲಿದೆ.

ರೈತರು: ಸುಗ್ಗಿ ಮತ್ತು ಬಿತ್ತನೆ ಸಮಯದಲ್ಲಿಈ ಯೋಜನೆಯ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರು ಸುಲಭವಾಗಿ ಸಿಗಲಿದ್ದಾರೆ.

ಗ್ರಾಮ ಪಂಚಾಯಿತಿಗಳು: ಕೇವಲ ಮಣ್ಣಿನ ಕೆಲಸ ಮಾಡುವ ಬದಲು, ರಸ್ತೆ, ಕೆರೆ, ಮತ್ತು ಕಾಲುವೆಗಳಂತಹ ‘ಶಾಶ್ವತ ಆಸ್ತಿ’ಗಳನ್ನು ನಿರ್ಮಿಸುವುದರಿಂದ ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.