ಬೆಂಗಳೂರು ಏರ್‌ಪೋರ್ಟ್‌ನಲ್ಲಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಎರಡು ದಿನಗಳಿಂದ ಇಂಡಿಗೋ ಏರ್ಲೈನ್ಸ್‌ಗಳ ವಿಮಾನ ಹಾರಾಟದಲ್ಲಿ ಉಂಟಾಗಿರುವ ಭಾರೀ ವ್ಯತ್ಯಯದಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನಗಳ ನಿರಂತರ ರದ್ದು, ವಿಳಂಬ, ಸಿಬ್ಬಂದಿ ಕೊರತೆ ಹಾಗೂ ತಾಂತ್ರಿಕ ಅಡಚಣೆಗಳು ಸೇರಿ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.ಮೂಲಗಳ ಪ್ರಕಾರ, ಸಿಬ್ಬಂದಿ ಕೊರತೆ ಹಾಗೂ ಕಾರ್ಯಾಚರಣಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂಡಿಗೋ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ಕೋಲ್ಕತ್ತಾ, ಗೋವಾ, ದೆಹಲಿ, ಹೈದರಾಬಾದ್, ಪುಣೆ ಮುಂತಾದ ಪ್ರಮುಖ ಮಾರ್ಗಗಳ ವಿಮಾನಗಳನ್ನು ಬಳಸಬೇಕಿದ್ದ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಜೈಪುರದಿಂದ ಬೆಂಗಳೂರು ಮೂಲಕ ಶ್ರೀಲಂಕಾ ಮತ್ತು ಮಲೇಷಿಯಾದತ್ತ ತೆರಳಬೇಕಿದ್ದ ಪ್ರಯಾಣಿಕರ ತಂಡವೊಂದಕ್ಕೆ ಈ ವ್ಯತ್ಯಯದಿಂದ ದೊಡ್ಡ ಹೊಡೆತವಾಗಿದೆ. ಬೆಳಗ್ಗೆ 4 ಗಂಟೆಗೆ ಹಾರಾಟಕ್ಕೆ ನಿಗದಿಯಾಗಿದ್ದ ವಿಮಾನ, ದೆಹಲಿಯಿಂದ ಬಂದ ಇಂಡಿಗೋ ವಿಮಾನವೇ 10 ಗಂಟೆಗಳ ವಿಳಂಬದಿಂದ ಬೆಂಗಳೂರಿಗೆ ಆಗಮಿಸಿದ ಕಾರಣ ಮಿಸ್ ಆಗಿದೆ. ತಡರಾತ್ರಿ ದೆಹಲಿ ಮತ್ತು ಜೈಪುರದಿಂದ ಹೊರಟಿದ್ದ 100 ಕ್ಕೂ ಹೆಚ್ಚು ಪ್ರಯಾಣಿಕರು ಬೆಳಗ್ಗೆ 11.30 ಗಂಟೆಗೆ ಕೆಐಎಗೆ ಬಂದಿಳಿದಿದ್ದಾರೆ. ವಿಮಾನ ಮಿಸ್ ಆದ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ವಿವಿಧ ಹೋಟೆಲ್‌ಗಳಿಗೆ ಶಿಫ್ಟ್ ಮಾಡಲು ಟ್ರಾವೆಲ್ಸ್ ಏಜೆನ್ಸಿಗಳು ಬಸ್ಸುಗಳನ್ನು ಒದಗಿಸಿವೆ.ಕೆಐಎ ಅಧಿಕಾರಿಗಳ ಪ್ರಕಾರ, ಇಂಡಿಗೋ ಏರ್ಲೈನ್ಸ್‌ನ ಸಿಬ್ಬಂದಿ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಮರುಬುಕ್ಕಿಂಗ್ ಹಾಗೂ ಪರಿಹಾರದ ಬಗ್ಗೆ ಸೂಚನೆ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ.


