ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಿರ್ಮಲಾ ಸೀತಾರಾಮನ್ ಭಾಷಣ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ನ್ಯೂಯಾರ್ಕ್ನ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಜಾಗತಿಕ ಪಾತ್ರದ ಕುರಿತು ಮಾತನಾಡಿದರು.

ನ್ಯೂಯಾರ್ಕ್: ಜಾಗತಿಕವಾಗಿ ಭಾರತ ನಿರ್ವಹಿಸುತ್ತಿರುವ ಪಾತ್ರ ಹಿರಿದಾಗುತ್ತಿದೆ. ಹೊಸ ಆವಿಷ್ಕಾರಗಳನ್ನು ಹಂಚಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಭಾರತ ಸಿದ್ಧವಿದೆ. ಜಾಗತಿಕ ಶಾಂತಿ ಮತ್ತು ಸಮೃದ್ಧತೆ ಹೆಚ್ಚಿಸಲು ತನ್ನದೇ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತ ಜಾಗತಿಕವಾಗಿ ಹೇಗೆ ಪ್ರಮುಖ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ವಿವರಿಸಿದ್ದಾರೆ.‘2047ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು ಒಂದು ಶತಮಾನವಾಯಿತು. ಭಾರತೀಯರಿಗೆ ಮಾತ್ರವಲ್ಲ ಜಾಗತಿಕ ಸಮುದಾಯಕ್ಕೂ ಸಮೃದ್ಧತೆಯ ಹೊಸ ಯುಗವನ್ನು ಸೂಚಿಸಲು ಆ ಸಂದರ್ಭವು ಸದವಕಾಶ ಒದಗಿಸಿದೆ.
‘ಮುಂಬರುವ ದಶಕಗಳಲ್ಲಿ ಭಾರತ ತನ್ನ ಜನಸಂಖ್ಯಾ ಶಕ್ತಿಯನ್ನು ಹೇಗೆ ನಿಭಾಯಿಸುತ್ತದೆ, ಜಾಗತಿಕವಾಗಿ ಹೇಗೆ ಸಹಭಾಗಿತ್ವ ಸಾಧಿಸುತ್ತದೆ, ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಸಂಕೀರ್ಣತೆಯಲ್ಲಿ ಹೇಗೆ ಸಾಗುತ್ತದೆ ಎಂಬುದು ಮುಖ್ಯವಾಗಲಿದೆ. ಮುಂದಿನ ಹಾದಿಯಲ್ಲಿ ಸವಾಲುಗಳು ಇದ್ದರೂ ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳು ಆರ್ಥಿಕತೆಗೆ ಮಾತ್ರ ಸಂಬಂಧಿಸಿದ್ದಲ್ಲ, ತಂತ್ರಜ್ಞಾನ, ಸುಸ್ಥಿರತೆ ಮತ್ತು ಸಮಗ್ರ ಪ್ರಗತಿ ವಿಚಾರದಲ್ಲಿ ಜಾಗತಿಕವಾಗಿ ಭಾರತ ದಾರಿದೀಪವಾಗಲಿದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತದ ಆರ್ಥಿಕ ಮೂಲಭೂತ ಅಂಶಗಳು ಉತ್ತಮ
ಜಾಗತಿಕ ವಾತಾವರಣ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿದ್ದರೂ ಭಾರತದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಇದು ಭವಿಷ್ಯದ ಪ್ರಗತಿಗೆ ಪ್ರಬಲ ಬುನಾದಿಯಾಗುತ್ತಿದೆ. 2013ರಲ್ಲಿ ಭಾರತ ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿತ್ತು. ಈಗ ಐದನೇ ಸ್ಥಾನಕ್ಕೆ ಏರಿದೆ. 2027ಕ್ಕೆ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂಬುದು ಐಎಂಎಫ್ ಅಂದಾಜು ಎಂದು ಕೊಲಂಬಿಯಾ ಯೂನಿವರ್ಸಿಟಿಯ ಸಭಾಂಗಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಕೋವಿಡ್ ಸಾಂಕ್ರಾಮಿಕ ಸಂದರ್ಭವನ್ನು ಸರಿಯಾಗಿ ನಿಭಾಯಿಸಿದ್ದು, ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಡಿಜಿಟಲ್ ಮತ್ತು ಹಣಕಾಸು ವ್ಯವಸ್ಥೆ ಮೇಲೆ ಗಮನ ಹರಿಸಿದ್ದು, ಕಾನೂನು ನಿಯಂತ್ರಣದ ನಿಯಮಗಳನ್ನು ಸರಳಗೊಳಿಸಿದ್ದು, ಉದ್ದಿಮೆ ವಾತಾವರಣ ಹೆಚ್ಚು ಸರಳಗೊಳಿಸಿದ್ದು ಇವೆಲ್ಲವೂ ಭಾರತದ ಉತ್ತಮ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿವೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.