ನಾಲ್ಕು ದಶಕದ ಬಳಿಕ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಪಯನ ಮಾಡಿ ಹೊಸ ಇತಿಹಾಸ ಬರೆದ ಶುಭಾಂಶು ಶುಕ್ಲಾ

ಭಾರತದಿಂದ ಮೊದಲ ಬಾರಿಗೆ 1984ರಲ್ಲಿ ವಿಂಗ್‌ ಕಮಾಂಡರ್‌ ರಾಕೇಶ್‌ ಶರ್ಮಾ ಅವರ ಬಳಿಕ ಮೊದಲ ಬಾರಿಗೆ ಗ್ರೂಪ್‌ ಕ್ಯಾಪ್ಟನ್‌ ಆಗಿರುವ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗನಯಾತ್ರಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಟಿದ್ದಾರೆ.

Jun 26, 2025 - 11:19
ನಾಲ್ಕು ದಶಕದ ಬಳಿಕ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಪಯನ ಮಾಡಿ ಹೊಸ ಇತಿಹಾಸ ಬರೆದ ಶುಭಾಂಶು ಶುಕ್ಲಾ
ನಾಲ್ಕು ದಶಕದ ಬಳಿಕ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಪಯನ ಮಾಡಿ ಹೊಸ ಇತಿಹಾಸ ಬರೆದ ಶುಭಾಂಶು ಶುಕ್ಲಾ

ಬರೋಬ್ಬರಿ 40 ವರ್ಷಗಳ ಬಳಿಕ ನಮ್ಮ ಭಾರತದ ಗಗನಯಾತ್ರಿಯೊಬ್ಬರು ಅಂತರೀಕ್ಷ ಯಾನ ಮಾಡುತ್ತಿರುವುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಹಾಗೂ ಖುಷಿಪಡುವ ವಿಚಾರ. ಭಾರತದಿಂದ ಮೊದಲ ಬಾರಿಗೆ 1984ರಲ್ಲಿ ವಿಂಗ್‌ ಕಮಾಂಡರ್‌ ರಾಕೇಶ್‌ ಶರ್ಮಾ ಅವರ ಬಳಿಕ ಮೊದಲ ಬಾರಿಗೆ ಗ್ರೂಪ್‌ ಕ್ಯಾಪ್ಟನ್‌ ಆಗಿರುವ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗನಯಾತ್ರಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಟಿದ್ದಾರೆ. Axiom Space ಸ್ಪೇಸ್‌ನ Ax-4 missionನಡಿ ವಿಶ್ವದ ಇತರೆ ಮೂವರು ಗಗನಯಾತ್ರಿಗಳ ಜತೆಗೆ ಶುಭಾಂಶು ಶುಕ್ಲಾ ಅವರು ಸ್ಪೇಸ್‌ ಸ್ಟೇಷನ್‌ ಯಾತ್ರೆ ಕೈಗೊಂಡಿದ್ದಾರೆ. ಹೀಗಿರುವಾಗ, ಈ ಮಿಷನ್‌ನಡಿ ಶುಕ್ಲಾ ಅವರು ಕೂಡ ಪೈಲಟ್‌ ಆಗಿ ನಭಕ್ಕೆ ಹಾರುತ್ತಿರುವುದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತದ ಹಾಗೂ ಐತಿಹಾಸಿಕ ಮೈಲುಗಲ್ಲು ಆಗಿದೆ. 

ಸುಮಾರು ನಾಲ್ಕು ದಶಕದ ಬಳಿಕ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳುವುದಕ್ಕೆ ಸುವರ್ಣಾವಕಾಶ ಪಡೆದುಕೊಂಡಿರುವ ಕ್ಯಾ. ಶುಭಾಂಶು ಶುಕ್ಲಾ ಅವರು ಯಾರು? ಅವರು ಎಲ್ಲಿಯವರು, 130 ಕೋಟಿ ಜನರ ಪೈಕಿ ಅವರನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬಿತ್ಯಾದಿ ಕುತೂಹಲದ ಪ್ರಶ್ನೆ ಎಲ್ಲರಲ್ಲಿಯೂ ಮೂಡುವುದು ಸಹಜ.
  
39 ವರ್ಷದ ಶುಭಾಂಶು ಅವರು 1985ರ ಅ.10ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಶಂಭು ದಯಾಳ್ ಶುಕ್ಲಾ ಮತ್ತು ಆಶಾ ಶುಕ್ಲಾ ಅವರ ಪುತ್ರನಾಗಿ ಜನಸಿದ್ದಾರೆ. ಅಲಿಗಂಜ್ ಸಿಟಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶುಕ್ಲಾ ಅವರು 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಿಂದ ದೇಶ ಸೇವೆ ಮಾಡುವ ಸ್ಫೂರ್ತಿ ಪಡೆದುಕೊಂಡಿದ್ದರು. ಆ ಬಳಿಕ ಸ್ವಯಂ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆ ಬರೆದು ಪಾಸಾಗಿದ್ದು, 2005ರಲ್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದರು. ಮುಂದೆ ಇಂಡಿಯನ್‌ ಏರ್‌ಫೋರ್ಸ್‌ ಅಕಾಡೆಮಿಯಿಂದ ತರಬೇತಿ ಪಡೆದು 2006ರಲ್ಲಿ ಭಾರತೀಯ ವಾಯುಸೇನೆಗೆ ಫ್ಲೈಯಿಂಗ್‌ ಆಫೀಸರ್‌ ಆಗಿ ಸೇರುವ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸುವ ತಮ್ಮ ಕನಸನ್ನು ನನಸು ಮಾಡಿಕೊಂಡರು.

 

ಶುಕ್ಲಾ ಅವರು ವಾಯುಸೇನೆ ಪಾಲಿಗೆ ಫೈಟರ್‌ ಜೆಟ್‌ಗಳ ಯುದ್ಧ ವಿಮಾನಗಳನ್ನು ಹಾರಾಡಿಸುವಲ್ಲಿ ಅಪಾರ ಕೌಶಲ್ಯ ಹಾಗೂ ತಂತ್ರಗಾರಿಕೆಯನ್ನು ಹೊಂದಿರುವ ಪೈಲಟ್‌ ಆಗಿ ಗುರುತಿಸಿಕೊಂಡರು. ಸುಕೋಯ್‌-30, ಮಿಗ್‌-21, ಜಾಗ್ವಾರ್‌, ಹವಕ್‌ ಸೇರಿದಂತೆ ಹಲವು ಮುಂಚೂಣಿಯ ಯುದ್ಧ ವಿಮಾನಗಳನ್ನು ಯಶಸ್ಸಿಯಾಗಿ ಹಾರಾಟ ಮಾಡಿಸುವ ಮೂಲಕ ಸುಮಾರು 2 ಸಾವಿರಕ್ಕೂ ಹೆಚ್ಚು ಅವಧಿಯ ಫ್ಲೈಯಿಂಗ್‌ ಅನುಭವ ಹೊಂದಿದ್ದಾರೆ. 2019ರಲ್ಲಿ ಭಾರತೀಯ ಮಾನವ ಸ್ಪೇಸ್‌ಫ್ಲೈಟ್‌ ಪ್ರೋಗ್ರಾಮ್‌ಗೆ ಭಾರತೀಯ ವಾಯುಸೇನೆಯಿಂದ ಗಗನಯಾತ್ರಿಯಾಗಿ ಆಯ್ಕೆಯಾಗುವ ಪ್ರಕ್ರಿಯೆಯಲ್ಲಿ ಗುರುತಿಸಿಕೊಂಡರು. ಬಳಿಕ ಇಸ್ರೋದ ಇನ್‌ಸ್ಟಿಟ್ಯೂಟ್‌ ಆಫ್‌ ಏರೋಸ್ಪೇಸ್‌ ಮೆಡಿಸಿನ್‌ನ ನಾಲ್ವರು ಅರ್ಹತೆ ಪಡೆದ ಪೈಲಟ್‌ಗಳ ಪಟ್ಟಿಗೆ ಆಯ್ಕೆಯಾದರು. 2020ರಲ್ಲಿ ಶುಕ್ಲಾ ಅವರು ಇತರೆ ಮೂವರು ಗಗನಯಾತ್ರಿಗಳ ಜತೆಗೆ ರಷ್ಯಾಕ್ಕೆ ತೆರಳಿ ತರಬೇತಿ ಪಡೆದುಕೊಂಡಿದ್ದಾರೆ. ಅಲ್ಲಿಂದ ವಾಪಾಸ್‌ ಬಂದ ಶುಕ್ಲಾ ಅವರು ಬೆಂಗಳೂರಿನಲ್ಲಿರುವ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ ಹೆಚ್ಚಿನ ಟ್ರೈನಿಂಗ್‌ ಪಡೆದುಕೊಂಡಿದ್ದರು. ಅದೇವೇಳೆಗೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಿಂದ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಉನ್ನತ ಪದವಿಯನ್ನು ಪಡೆದುಕೊಂಡಿದ್ದಾರೆ. ಭಾರತದ ಮೊದಲ ಹ್ಯೂಮನ್‌ ಸ್ಪೇಸ್‌ ಮಿಷನ್‌ನ ತಂಡದ ಸದಸ್ಯರಾಗಿ ಶುಭಾಂಶು ಶುಕ್ಲಾ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು 2024ರ ಫೆ.27ರಂದು ತಿರುವನಂತಪುರದಲ್ಲಿ ಘೋಷಣೆ ಮಾಡುವುದರೊಂದಿಗೆ ಶುಕ್ಲಾ ಅವರ ಪ್ರತಿಭೆ, ಅವರ ಸಾಧನೆ ಏನು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿತ್ತು. 

ಇದೀಗ ಶುಕ್ಲಾ ಅವರು  Axiom Mission 4ನಡಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ಗೆ ಪ್ರಯಾಣಿಸಿದ್ದಾರೆ. ನಾಸಾ, ಸ್ಪೇಸ್‌ಎಕ್ಸ್‌ ಹಾಗೂ ಇಸ್ರೋದ ಸಹಯೋಗದಲ್ಲಿ ಶುಕ್ಲಾ ಸೇರಿದಂತೆ ಒಟ್ಟು ನಾಲ್ವರು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಾಗಿದೆ. 

ಶುಕ್ಲಾ ಅವರು ತಮ್ಮ ಸಹಪಾಠಿಯಾಗಿರುವ ದಂತ ವೈದ್ಯೆ ಡಾ. ಕಮ್ನಾ ಮಿಶ್ರಾ ಅವರನ್ನು ಮದುವೆಯಾಗಿದ್ದು, ಈಗ ನಾಲ್ಕು ವರ್ಷದ ಮಗ ಇದ್ದಾನೆ. ತಂದೆ ಶಂಭು ದಯಾಲ್‌ ಶುಕ್ಲಾ ಅವರು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ತಾಯಿ ಆಶಾ ಶುಕ್ಲಾ ಅವರು ಗೃಹಿಣಿಯಾಗಿದ್ದಾರೆ. ಮೂವರು ಮಕ್ಕಳ ಪೈಕಿ ಶುಭಾಂಶು ಕಿರಿಯವರಾಗಿದ್ದು, ಹಿರಿಯ ಸಹೋದರಿ ನಿಧಿ ಎಂಬಿಎ ಪದವೀಧರಾಗಿದ್ದು, ಇನ್ನೊಬ್ಬರು ಸಹೋದರಿ ಸುಚಿ ಮಿಶ್ರಾ ಅವರು ಅಧ್ಯಾಪಕಿಯಾಗಿದ್ದಾರೆ. ಶಂಭು ಹಾಗೂ ಆಶಾ ಶುಕ್ಲಾ ಅವರ ಏಕೈಕ ಪುತ್ರ ಶುಭಾಂಶು ಅವರು ರಾಕೇಶ್‌ ಶರ್ಮಾ ಅವರ ನಂತರ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಗಗನಯಾತ್ರಿಯಾಗಿ ವಿಶ್ವದ ಗಮನಸೆಳೆದಿದ್ದಾರೆ. ಇದು ಭಾರತೀಯರ ಪಾಲಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.