ನೌಕಾನೆಲೆಗೆ ಹಾರಿಬಂದ ಸೀಗಲ್​ ಹಕ್ಕಿಯಲ್ಲಿ ಚೀನಾದ GPS ಟ್ರ್ಯಾಕರ್ ಪತ್ತೆ

ಟ್ರ್ಯಾಕರ್ ಹೊಂದಿದ್ದ ಸೀಗಲ್​ ಹಕ್ಕಿಯನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸದ್ಯ ಇದು ಜನರ ಆತಂಕಕ್ಕೆ ಕಾರಣವಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Dec 17, 2025 - 16:42
ನೌಕಾನೆಲೆಗೆ ಹಾರಿಬಂದ ಸೀಗಲ್​ ಹಕ್ಕಿಯಲ್ಲಿ ಚೀನಾದ GPS ಟ್ರ್ಯಾಕರ್ ಪತ್ತೆ

 ಕಳೆದ ವರ್ಷ ಕಾರವಾರ ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ್ದ ರಣಹದ್ದು ಒಂದು ಕಂಡು ಬಂದಿತ್ತು. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಅಂತಹದೇ ಒಂದು ಘಟನೆ ಮರುಕಳಿಸಿದೆ. ಚೀನಾದ ಜಿಪಿಎಸ್​ ಟ್ರ್ಯಾಕರ್​​ ಹೊಂದಿರುವ ಸೀಗಲ್​ ಪಕ್ಷಿಒಂದು ಕದಂಬ ನೌಕಾನೆಲೆ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಟ್ರ್ಯಾಕರ್ ಹೊಂದಿದ್ದ ಸೀಗಲ್​ ಹಕ್ಕಿಯನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸದ್ಯ ಇದು ಜನರ ಆತಂಕಕ್ಕೆ ಕಾರಣವಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದಲ್ಲಿ ಚಳಿ ಹೆಚ್ಚಿದೆ. ಆದರೆ ಇತ್ತ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ಬೆಚ್ಚಗಿನ ವಾತಾವರಣವಿದೆ. ಹೀಗಾಗಿ ಸೀಗಲ್​​ ಹಕ್ಕಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗೆ ಹಾರಿಬಂದ ವಲಸಿಗ ಸೀಗಲ್​ ಹಕ್ಕಿಯಲ್ಲಿ ಚೀನಾದ ಜಿಪಿಎಸ್​ ಟ್ರ್ಯಾಕರ್​​ ಪತ್ತೆ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಕದಂಬ ನೌಕಾನೆಲೆ ಪ್ರದೇಶದಲ್ಲಿ ಕಾಣಿಸಿಕೊಂಡ ಈ ಸೀಗಲ್ ಹಕ್ಕಿ ಕಂಡು ಪೊಲೀಸರು ಕೂಡ ಆತಂಕಗೊಂಡಿದ್ದಾರೆ. ಸದ್ಯ ಕಾರವಾರ ಪೊಲೀಸರು ಈ ಟ್ರ್ಯಾಕರ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಪಿಎಸ್​ ಟ್ರ್ಯಾಕರ್​ನಲ್ಲಿ ಚೀನಾದ ವಿಜ್ಞಾನ ಅಕಾಡೆಮಿಯ ಇಕೋ-ಎನ್ವಿರಾನ್ಮೆಂಟ್ ಸೈನ್ಸ್ ಎಂದು ಬರಹ ನಮೂದಿಸಲಾಗಿದೆ. ಸೀಗಲ್ ಹಕ್ಕಿಗಳ ಚಲನವಲನ, ಅವುಗಳ ಆಹಾರ ಪದ್ಧತಿ ಹಾಗೂ ವಲಸೆ ಸಮೀಕ್ಷೆಗೆ ಜಿಪಿಎಸ್​ ಟ್ರ್ಯಾಕರ್ ಅಳವಡಿಸಲಾಗಿದೆ ಎನ್ನಲಾಗುತ್ತಿದೆ.​​

ಸದ್ಯ ಸೀಗಲ್ ಹಕ್ಕಿ ಮರೈನ್ ಅರಣ್ಯ ವಿಭಾಗದ ಕಚೇರಿಗೆ ಶಿಫ್ಟ್ ಮಾಡಲಾಗಿದ್ದು, ಚೀನಾದ ಅಕಾಡೆಮಿಯನ್ನು ಅರಣ್ಯ ಅಧಿಕಾರಿಗಳು ಸಂಪರ್ಕಿಸುತ್ತಿದ್ದಾರೆ. ಸೀಗಲ್ ಹಕ್ಕಿ ಪತ್ತೆಯಾದ ಪ್ರದೇಶ ನೌಕಾನೆಲೆ ಸ್ಥಳವಿದ್ದು, ಈ ಕುರಿತು ನೌಕಾದಳ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.