ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ ’ಬ್ಯಾಕ್ ಟು ಊರು ’ ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ: ಸಂಸದ ಕ್ಯಾ. ಚೌಟ
ಸೇಫ್ಟಿ ಇಂಡೆಕ್ಸ್ನಲ್ಲಿ ದೇಶದ ಟಾಪ್ 10 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು ಅತ್ಯಂತ ಸೇಫೆಸ್ಟ್ ಸಿಟಿಯಾಗಿ ಮೊದಲ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಕಡಿಮೆ ಅಪರಾಧ ಪ್ರಮಾಣ ಹಾಗೂ ಉತ್ತಮ ನಾಗರಿಕ ಮೂಲಸೌಕರ್ಯದ ಮಾನದಂಡದ ಆಧಾರದಲ್ಲಿ ಮಂಗಳೂರು ನಗರವು ಜಾಗತಿಕ ಮಟ್ಟದಲ್ಲಿ 74.2 ಸೇಫ್ಟಿ ಇಂಡೆಕ್ಸ್ ಸ್ಕೋರ್ನೊಂದಿಗೆ 49ನೇ ರ್ಯಾಂಕಿಂಗ್ ಪಡೆದುಕೊಂಡಿದೆ. ಮಂಗಳೂರು ನಗರದ ನಂತರದಲ್ಲಿ ಗುಜರಾತ್ನ ವಡೋದರಾ, ಅಹಮದಾಬಾದ್ ಹಾಗೂ ಸೂರತ್ ನಗರಗಳು ಅತಿಹೆಚ್ಚು ಸುರಕ್ಷಿತ ನಗರಗಳ ಇಂಡೆಕ್ಸ್ನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
 
                                    ನವದೆಹಲಿ: ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕದಲ್ಲಿ (Numbeo Safety Index), ಭಾರತದ ಟಾಪ್ 10 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು ಅತ್ಯಂತ ಸುರಕ್ಷಿತ ನಗರವಾಗಿ ಪ್ರಥಮ ಸ್ಥಾನ ಪಡೆದು ತುಳುನಾಡು ಹಾಗೂ ಕರ್ನಾಟಕದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ 393 ನಗರಗಳ ಪಟ್ಟಿಯಲ್ಲಿ ಮಂಗಳೂರು 74.2 ಸುರಕ್ಷತಾ ಸೂಚ್ಯಂಕ 49ನೇ ರ್ಯಾಂಕಿಂಗ್ ಪಡೆದುಕೊಂಡಿರುವುದು ಬಹಳ ಖುಷಿಪಡುವ ವಿಚಾರ ಎಂದು ಕ್ಯಾ. ಚೌಟ ಪ್ರತಿಕ್ರಿಯಿಸಿದ್ದಾರೆ.
 
            
"ಮಂಗಳೂರಿನ ಈ ಮಹತ್ತರ ಸಾಧನೆಯು ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ಅಲ್ಲ. ಮಂಗಳೂರು ನಗರವನ್ನು ಸುಂದರ ಹಾಗೂ ಸುರಕ್ಷಿತ ನಗರವಾಗಿ ರೂಪಿಸುವಲ್ಲಿ ಇಲ್ಲಿನ ಎಲ್ಲ ನಿವಾಸಿಗಳ ಸಹಕಾರ, ಸಹಭಾಗಿತ್ವ ಹಾಗೂ ನಾಗರಿಕ ಸಂವೇಧನಾಶೀಲತೆ ಪಾಲು ಬಹಳ ದೊಡ್ಡದಿದೆ. ಒಂದು ನಗರವು ಇಲ್ಲಿನ ಮೂಲಸೌಕರ್ಯ ಹಾಗೂ ಇತರೆ ನಾಗರಿಕ ಶಿಸ್ತುಗಳಿಂದಾಗಿ ಇಡೀ ದೇಶದಲ್ಲೇ ಅತ್ಯಂತ ಸುರಕ್ಷಿತ ನಗರವಾಗಿ ಗುರುತಿಸುವುದು ಅಷ್ಟೊಂದು ಸುಲಭವಿಲ್ಲ ಎಂದು ಭಾವಿಸುತ್ತೇನೆ. ಹೀಗಿರುವಾಗ, ಇದು ನಮ್ಮ ಮಂಗಳೂರಿನವರು ಸುರಕ್ಷಿತ ಮತ್ತು ನೆಮ್ಮದಿಯ ವಾತಾವರಣದಲ್ಲಿ ಬದುಕುತ್ತಿರುವುದಕ್ಕೆ ಉತ್ತಮ ನಿದರ್ಶನವಾಗಿದೆ. ಮಂಗಳೂರಿಗೆ ಈ ರೀತಿಯ ಮನ್ನಣೆ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಜತೆಗೆ ಮಂಗಳೂರು ನಗರವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವುದಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
 
ಜಾಗತಿಕ ಮಟ್ಟದ ಈ ರೀತಿಯ ಮನ್ನಣೆಯು ವಿಶ್ವದೆಲ್ಲೆ ಇರುವ ನಮ್ಮೆಲ್ಲಾ ಯಶಸ್ವಿ ಮಂಗಳೂರಿನವರಿಗೆ "ಬ್ಯಾಕ್ ಟು ಊರಿಗೆ "(BackToOoru) ಬರಲು ಇನ್ನೊಂದು ಸಕಾರಣ ಹಾಗೂ ಸಕಾಲವೂ ಹೌದು. ಇಲ್ಲಿನ ವಿಪುಲ ಅವಕಾಶ-ಸಾಧ್ಯತೆಗಳನ್ನು ಬಳಸಿಕೊಳ್ಳಲು ಉತ್ತಮ ಅವಕಾಶ. ಅವರ ಕನಸುಗಳು, ಆಲೋಚನೆಗಳು, ಹೂಡಿಕೆಗಳು ಮತ್ತು ಬೆಳವಣಿಗೆಯ ನಿರೀಕ್ಷೆಗಳಿಗೆ ಮಂಗಳೂರು ನೆಚ್ಚಿನ ನಗರವಾಗಿದೆ. ಈ ಶ್ರೇಯಾಂಕವು ಮಂಗಳೂರು ನಗರದ ಭವಿಷ್ಯದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಹೊಸ ದಿಕ್ಸೂಚಿ ತೆರೆದಿದ್ದು, ಎಲ್ಲಾ ಮಂಗಳೂರಿಗರೂ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದು, ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನಗರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಉತ್ತೇಜನ ನೀಡಿದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 




 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                             
                                             
                                             
                                             
                                             
                                             
                                             
                                             
                                             
                                            