ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ: ಸಿಪಿ ಯೋಗೇಶ್ವರ್
ಜೆಡಿಎಸ್‌ನಿಂದ ನಿಂತರೇ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ. ಟಿಕೆಟ್ ಸಿಗದೇ ಇದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ಬಿಜೆಪಿ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ಹೇಳಿದರು.
 
                                ಬೆಂಗಳೂರು: ಜೆಡಿಎಸ್‌ನಿಂದ ನಿಂತರೇ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ. ಟಿಕೆಟ್ ಸಿಗದೇ ಇದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ಬಿಜೆಪಿ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ಹೇಳಿದರು.ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ವಿಚಾರವಾಗಿ ನಾನು ಅವಕಾಶ ಕೊಟ್ಟರೆ ಎನ್‌ಡಿಎ (NDA) ಅಭ್ಯರ್ಥಿ ಆಗುತ್ತೇನೆ. ಆದರೆ ಅವಕಾಶ ಸಿಗಬೇಕು ಅಷ್ಟೇ. ನಾನು ನನ್ನ ಪಾರ್ಟನರ್ ಕುಮಾರಸ್ವಾಮಿ ಮೂರು ದಿನಗಳಿಂದ ಚರ್ಚೆ ಮಾಡುತ್ತಿದ್ದೇವೆ. ನಾನು ಜೆಡಿಎಸ್‌ನಿಂದ ನಿಂತರೇ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ. ಆದರೆ ಅವರು ಆಗಲ್ಲ ಅಂತಿದ್ದಾರೆ. ಕುಮಾರಸ್ವಾಮಿ ಮನಸ್ಸಿನಲ್ಲಿ ಅವರ ಮಗನಿಗೆ ಟಿಕೆಟ್ ಕೊಡಬೇಕು ಎಂದು ಆಸೆ ಇದೆ. ಅವರ ಮನಸಲ್ಲೇ ಆತರಹ ಇದ್ದರೆ ಏನು ಮಾಡೋದಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರು ಅವರ ಕುಟುಂಬದವರಿಗೇ ಟಿಕೆಟ್ ಕೊಡಬೇಕು ಎಂದು ಆಸೆಯಿದೆ. ತಾವು ರಾಜೀನಾಮೆ ಕೊಟ್ಟ ನಂತರದಿಂದಲೂ ನಿಖಿಲ್‌ಗೆ ನಿಲ್ಲಿಸಬೇಕು ಎಂದು ಅವರ ಮನಸಿನಲ್ಲಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಮನಸಲ್ಲಿ ಆ ಭಾವನೆ ಇರುವಾಗ ಏನು ಬಲವಂತ ಸಾಧ್ಯ? ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಎಂದು ಅವರು ಮುಕ್ತವಾಗಿ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದರೂ ಅಷ್ಟೇ. ನಾನು ನನ್ನ ತಾಲೂಕಿನ ಜನರ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಬಹಳ ಭಿನ್ನಾಭಿಪ್ರಾಯ ಬಂದಿದೆ. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗುವುದು ಬೇಡ ಅಂತ ತಾಲೂಕಿನಲ್ಲಿ ಅಭಿಪ್ರಾಯ ಬಂದಿದೆ. ಮೊದಲೇ ನನಗೆ ಪಕ್ಷಾಂತರಿ ಎಂದು ಕರೆಯುತ್ತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಹೇಳಿದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 




 
                                                                                                                                                     
                                                                                                                                                     
                                                                                                                                                     
                                             
                                             
                                             
                                             
                                             
                                             
                                             
                                             
                                             
                                            