ವಿಕಲಚೇತನರ ಬೇಡಿಕೆ ಶೀಘ್ರವೇ ಈಡೇರಿಕೆ : ಸಚಿವೆ ಲಕ್ಷ್ಮೀ ಹೆಬ್ಬಾಳರ್ ಭರವಸೆ
 
            
 
 
            
 
 
 
 
 
 
ಬೆಂಗಳೂರು : ವಿಕಲಚೇತನರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುವುದು. ಮುಂದಿನ ಅಯವ್ಯಯದ ವೇಳೆಗೆ ವಿಕಲಚೇತನರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ "ವಿಶ್ವ ವಿಕಲಚೇತನ ದಿನಾಚರಣೆ' ಸಮಾರಂಭದಲ್ಲಿ ಮಾತನಾಡಿದ ಸಚಿವರು, ವಿಕಲಚೇತರನ್ನು ಸಾಮಾನ್ಯರಂತೆ ಕಾಣಬೇಕು, ಅವರ ಬೇಡಿಕೆಗಳನ್ನು ಈಡೇರಿಸಲು ವೈಯಕ್ತಿಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ವಿಕಲಚೇತನರ ಜೊತೆಗೆ ಸರ್ಕಾರ ಇರುತ್ತದೆ. ಕೇವಲ ಒಂದು ದಿನಕ್ಕೆ ವಿಕಲಚೇತನರ ಬಗ್ಗೆ ಚಿಂತಿಸಬಾರದು. ವರ್ಷಪೂರ್ತಿ ಸರ್ಕಾರ ಅವರ ಕಾಳಜಿ ವಹಿಸುತ್ತದೆ. ಸ್ವಾಭಿಮಾನ ಹಾಗೂ ಸ್ವಾಲಂಬನೆ ಜೀವನಕ್ಕೆ ಸರ್ಕಾರ ಸಹಕಾರ ನೀಡುತ್ತದೆ ಎಂದು ಸಚಿವರು ಹೇಳಿದರು. ವಿಶೇಷವಾಗಿ ವಿಕಲಚೇತನರು ಯಾರ ಮೇಲೂ ಅವಲಂಬಿರಾಗದೆ ಸ್ವತಂತ್ರವಾಗಿ ಓಡಾಡುವಂತಾಗಬೇಕು ಎಂದರು.
ಅವರಿದ್ದಲ್ಲೇ ಸರಕಾರಿ ಸೌಲಭ್ಯ ಸಿಗಬೇಕು, ಅವರಿದ್ದಲ್ಲೇ ಆರೋಗ್ಯ ಸೇವೆ ಸಿಗಬೇಕು. ವಿಕಲಚೇತನರು ದೈಹಿಕವಾಗಿ ಅಸಮರ್ಥರಿದ್ದರೂ ಮಾನಸಿಕವಾಗಿ ತುಂಬಾ ಸದೃಢರು. ವಿಕಲಚೇತನರು ಮಾಡಿರುವ ಸಾಧನೆಯೇ ಇದಕ್ಕೆ ಸಾಕ್ಷಿ ಎಂದು ಸಚಿವರು ಹೇಳಿದರು. ರಾಜ್ಯ ಸರ್ಕಾರ ಈಗಾಗಲೇ ವಿಕಲಚೇತನರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ವಿಕಲಚೇತನರಿಗೆ ಈ ವರ್ಷ 284 ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಿದೆ ಎಂದರು. ಸಾಮಾನ್ಯ ಜನರಂತೆ ವಿಕಲಚೇತನರು ಜೀವನ ನಡೆಸಲು ಸರ್ಕಾರ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಿದೆ ಎಂದರು.
* ಪಾಲಕರಿಗೆ ಹೆಚ್ಚಿನ ನೆರವು 
ಸಾಮಾನ್ಯ ಮನುಷ್ಯರಿಗಿಂತ  ವಿಕಲಚೇತನರ ಮಿದುಳು ಎರಡು ಪಟ್ಟು ಹೆಚ್ಚು ಕೆಲಸ ಮಾಡುತ್ತದೆ. ಇದಕ್ಕೆ ಅಂಧರು ಬರೆಯುವ ಚಿತ್ರಕಲೆಯೇ ಸಾಕ್ಷಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ವಿಕಲಚೇತನರನ್ನು ಪಾಲಿಸುತ್ತಿರುವ ಪಾಲಕರು ಹಾಗೂ ಶಿಕ್ಷಕರ ಶ್ರಮ, ತಾಳ್ಮೆಯನ್ನು ಮೆಚ್ಚಲೇಬೇಕು. ಅವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಅವರ ಸೇವಾಮನೋಭಾವನ್ನು ನಾವು ಗೌರವಿಸಬೇಕು. ಅವರ ಸೇವೆಯನ್ನು ಗುರುತಿಸಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂಧಿಸಲಿದೆ ಎಂದು ಸಚಿವರು ಹೇಳಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸಿದರು.  
ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಎನ್. ಸಿದ್ದೇಶ್ವರ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಕರ್ನಾಟಕ ಬೌದ್ಧಿಕ ವಿಕಲಚೇತನ ಮಕ್ಕಳ ಪಾಲಕರ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಗಡ್ಕರಿ.ಜೆ.ಪಿ ಉಪಸ್ಥಿತರಿದ್ದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 




 
                                                                                                                                                     
                                                                                                                                                     
                                                                                                                                                     
                                                                                                                                                     
                                             
                                             
                                             
                                             
                                             
                                             
                                             
                                             
                                             
                                            