ಧೂಮಪಾನ ನಿಷೇಧಿಸಿದ ಜಗತ್ತಿನ ಮೊದಲು ರಾಷ್ಟ್ರ ಮಾಲ್ಡೀವ್ಸ್

ಮಾಲ್ಡೀವ್ಸ್ 2025ರ ನವೆಂಬರ್ 1ರಿಂದ ವಿಶ್ವದ ಮೊದಲ ತಂಬಾಕು ಮುಕ್ತ ದೇಶವಾಗಲಿದೆ. ಜನವರಿ 1, 2007ರ ನಂತರ ಜನಿಸಿದವರಿಗೆ ಧೂಮಪಾನ ನಿಷೇಧಿಸಲಾಗಿದೆ, ಇದು ಪ್ರವಾಸಿಗರಿಗೂ ಅನ್ವಯಿಸುತ್ತದೆ. ಸಾರ್ವಜನಿಕ ಆರೋಗ್ಯ ಸುಧಾರಿಸುವುದು ಮತ್ತು ಭವಿಷ್ಯದ ಪೀಳಿಗೆಯನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Dec 5, 2025 - 15:42
ಧೂಮಪಾನ ನಿಷೇಧಿಸಿದ ಜಗತ್ತಿನ ಮೊದಲು ರಾಷ್ಟ್ರ ಮಾಲ್ಡೀವ್ಸ್
Smoke

ಮಾಲ್ಡೀವ್ಸ್ ತಂಬಾಕು ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಹೆಜ್ಜೆಯನ್ನು ಇಟ್ಟಿದೆ. ಇದೀಗ ಮಾಲ್ಡೀವ್ಸ್ ಧೂಮಪಾನ ನಿಷೇಧ ಮಾಡಿದ ವಿಶ್ವದ ಮೊದಲ ದೇಶವಾಗಿದೆ. ನವೆಂಬರ್ 1, 2025ರ ಹೊಸ ಕಾನೂನಿನಡಿಯಲ್ಲಿ ಜನವರಿ 1, 2007ರ ನಂತರ ಜನಿಸಿದ ಯಾರಿಗೂ ಯಾವುದೇ ತಂಬಾಕು ಉತ್ಪನ್ನವನ್ನು ಖರೀದಿಸಲು ಅಥವಾ ಬಳಸಲು ಅವಕಾಶವಿಲ್ಲ, ಮತ್ತು ಈ ನಿಯಮವು ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಅನ್ವಯಿಸುತ್ತದೆ. ಮಾಲ್ಡೀವ್ಸ್ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ನೆಲೆಯನ್ನು ನೀಡಿದೆ. ಹಾಗಾಗಿ ತಂಬಾಕು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಇಲ್ಲಿನ ಜನರ ಆರೋಗ್ಯದ ಕಾಳಜಿ ವಹಿಸಲಿದೆ. ಈ ಕಾಯ್ದೆಗೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮೋದಿಸಿದ್ದು, ಇಂದಿನಿಂದ ಈ ಕಾನೂನು ಜಾರಿಯಲ್ಲಿರಲಿದೆ.

ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಭವಿಷ್ಯದ ಪೀಳಿಗೆಯನ್ನು ಧೂಮಪಾನದಿಂದ ರಕ್ಷಿಸಲು ಈ ಐತಿಹಾಸಿಕ ಮೈಲಿಗಲ್ಲುನ್ನು ಸಾಧಿಸಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯನ್ನು ನೀಡಿದೆ. ಈ ಕಾನೂನು ಎಲ್ಲಾ ರೀತಿಯ ತಂಬಾಕನ್ನು ಒಳಗೊಳ್ಳುತ್ತದೆ. ಅಂಗಡಿ, ಮಾರುಕಟ್ಟೆಗಳಲ್ಲಿ ಈ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವ ಮೊದಲು ಗ್ರಾಹಕರ ವಯಸ್ಸನ್ನು ಪರಿಶೀಲಿಸಬೇಕು ಎಂದು ಸರ್ಕಾರ ಆದೇಶವನ್ನು ನೀಡಿದೆ. ಈ ನಿಷೇಧವು ಇ-ಸಿಗರೇಟ್‌ಗಳು ಮತ್ತು ವೇಪಿಂಗ್ ಸಾಧನಗಳನ್ನು ಸಹ ಒಳಗೊಂಡಿದೆ. ಈ ಉತ್ಪನ್ನಗಳನ್ನು ವಯಸ್ಸಿನ ಹೊರತಾಗಿಯೂ ಯಾರೂ ಆಮದು ಮಾಡಿಕೊಳ್ಳಲು, ಮಾರಾಟ ಮಾಡಲು, ಹಂಚಿಕೊಳ್ಳಲು, ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಯುವಜನರನ್ನು ತಂಬಾಕು ಸಂಬಂಧಿತ ಕಾಯಿಲೆಯಿಂದ ದೂರವಿಡುವುದು ಸರ್ಕಾರ ಉದ್ದೇಶವಾಗಿದೆ. ತಂಬಾಕು ನಿಯಂತ್ರಣದ ಕುರಿತಾದ WHO ಫ್ರೇಮ್‌ವರ್ಕ್ ಸಮಾವೇಶದ ಅಡಿಯಲ್ಲಿ ಇದನ್ನು ತರಲಾಗಿದೆ ಎಂದು ಸಚಿವಾಲಯ ಹೇಳಿದೆ. ಒಂದು ವೇಳೆ ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಸರ್ಕಾರ ತಂದಿರುವ ಕಾನೂನುಗಳನ್ನು ಉಲ್ಲಂಘಿಸಿದರೆ ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ 50,000 ಮಾಲ್ಡೀವಿಯನ್ ರುಫಿಯಾ (ಸುಮಾರು ರೂ. 2.9 ಲಕ್ಷ) ದಂಡ ವಿಧಿಸಬಹುದು. ಇ-ಸಿಗರೇಟ್ ಅಥವಾ ವೇಪಿಂಗ್ ಸಾಧನಗಳನ್ನು ಬಳಸುವುದರಿಂದ ಸಿಕ್ಕಿಬಿದ್ದ ಜನರು 5,000 ರುಫಿಯಾ (ಸುಮಾರು ₹ 29,000) ದಂಡ ವಿಧಿಸಲಾಗುತ್ತದೆ.