ಜನರಿಗೆ ಮೋಸ ಮಾಡಲು ಅತಿ ಹೆಚ್ಚು ಬಳಕೆ ಆಯ್ತು ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಹೆಸರು
ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಯಾಮಾರಿಸಲು ಒರಿ ಹೆಸರು ಹೆಚ್ಚಾಗಿ ಬಳಕೆ ಆಗಿದೆ ಎಂಬ ವಿಚಾರ ಬಹಿರಂಗವಾಗಿದೆ.
ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಮುಂತಾದ ಸೆಲೆಬ್ರಿಟಿಗಳ ಜೊತೆ ತುಂಬ ಆಪ್ತವಾಗಿ ನಿಂತು ಫೋಟೋ ತೆಗೆಸಿಕೊಳ್ಳುವ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಹೆಸರನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಯಾಮಾರಿಸಲು ಒರಿ ಹೆಸರು ಹೆಚ್ಚಾಗಿ ಬಳಕೆ ಆಗಿದೆ ಎಂಬ ವಿಚಾರ ಬಹಿರಂಗವಾಗಿದೆ.ಇತ್ತೀಚಿನ ವರ್ಷಗಳಲ್ಲಿ ಒರಿ ಹೆಸರು ಸಿಕ್ಕಾಪಟ್ಟೆ ಚಾಲ್ತಿಗೆ ಬಂತು. ಒರ್ಹಾನ್ ಅವತ್ರಮಣಿ ಎಂಬುದು ಈ ವ್ಯಕ್ತಿಯ ಪೂರ್ಣ ಹೆಸರು. ಬಾಲಿವುಡ್ ಮಂದಿಯ ಎಲ್ಲ ಪಾರ್ಟಿಗಳನ್ನೂ ಒರಿ ಕಾಣಿಸಿಕೊಳ್ಳಲು ಆರಂಭಿಸಿದರು. ಬಿ-ಟೌನ್ ಬೆಡಗಿ ಜಾನ್ವಿ ಕಪೂರ್ ಅವರಿಂದ ಹಿಡಿದು ಇಂಟರ್ನ್ಯಾಷನಲ್ ಸೆನ್ಸೇಷನ್ ರಿಯಾನಾ ತನಕ ಎಲ್ಲರ ಜೊತೆಗೂ ಒರಿ ಆಪ್ತವಾಗಿ ಫೋಟೋ ಕ್ಲಿಕ್ಕಿಸಿಕೊಂಡು ಜನಪ್ರಿಯತೆ ಗಳಿಸಿದರು. ಆದರೆ ಅವರ ಹೆಸರನ್ನು ಬಳಸಿಕೊಂಡು ಜನರಿಗೆ ಮೋಸ ಮಾಡುವ ದೊಡ್ಡ ಜಾಲವೇ ನಡೆದಿದೆ. ಆ ಬಗ್ಗೆ ಒಂದು ಅಚ್ಚರಿಯ ಮಾಹಿತಿ ಬಹಿರಂಗ ಆಗಿದೆ.
ಸೋಶಿಯಲ್ ಮೀಡಿಯಾಗೆ ಜನರು ಅಡಿಕ್ಟ್ ಆಗಿದ್ದಾರೆ. ಸದಾ ಕಾಲ ಇಂಟರ್ನೆಟ್ ಬಳಕೆಯಲ್ಲಿ ಬಹುತೇಕರು ಮುಳುಗಿರುತ್ತಾರೆ. ಹಾಗಾಗಿ ವಂಚಕರು ಕೂಡ ಇದೇ ಜಾಲವನ್ನು ಬಳಸುತ್ತಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರನ್ನು ಬಳಸಿಕೊಂಡು ಜನರಿಗೆ ಮೋಸ ಮಾಡುವ ಸೈಬರ್ ಖದೀಮರು ಸಕ್ರಿಯವಾಗಿದ್ದಾರೆ. ಅಚ್ಚರಿ ಏನೆಂದರೆ, ಸೈಬರ್ ವಂಚಕರು ಅತಿ ಹೆಚ್ಚು ಬಳಕೆ ಮಾಡಿರುವ ಹೆಸರು ಒರಿ ಅವರದ್ದು!
ಖಾಸಗಿ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬಹಿರಂಗ ಆಗಿದೆ. ಸೈಬರ್ ಖದೀಮರು ಬಳಸಿದ ಟಾಪ್ 10 ಸೆಲೆಬ್ರಿಟಿಗಳ ಹೆಸರಿನ ಪೈಕಿ ಒರಿ ಹೆಸರು ನಂಬರ್ 1 ಸ್ಥಾನದಲ್ಲಿದೆ. ಗಾಯಕ-ನಟ ದಿಲ್ಜಿತ್ ದೋಸಾಂಜ್ ಹೆಸರು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ನಟಿ ಆಲಿಯಾ ಭಟ್, 4ನೇ ಸ್ಥಾನದಲ್ಲಿ ನಟ ರಣವೀರ್ ಸಿಂಗ್ ಹೆಸರು ಇದೆ. ಅಲ್ಲದೇ ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳ ಹೆಸರು ಕೂಡ ಬಳಕೆ ಆಗಿದೆ.