ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಇಂದು ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ(CJI) ಪ್ರಮಾಣವಚನ ಸ್ವೀಕರಿಸಿದ್ದಾರೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ.ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.ನ್ಯಾ.ಖನ್ನಾ ಅವರ ಹೆಸರನ್ನು ನ್ಯಾ.ಡಿವೈ ಚಂದ್ರಚೂಡ್ ಅವರು ಶಿಫಾರಸು ಮಾಡಿದ್ದರು.ನ್ಯಾ.ಚಂದ್ರಚೂಡ್ ಅವರು ನ.10 ರಂದು ಹುದ್ದೆಯಿಂದ ನಿವೃತ್ತರಾದರು.ನ್ಯಾ.ಖನ್ನಾ 1960ರ ಮೇ 14ರಂದು ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯಾದ ದೇವ್ ರಾಜ್ ಖನ್ನಾ ಅವರ ಮಗನಾಗಿ ಜನಿಸಿದ ಸಂಜೀವ್ ಖನ್ನಾ ದೆಹಲಿಯ ಪ್ರತಿಷ್ಠಿತ ಮಾಡರ್ನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
1980ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಅನಂತರ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.ಜನವರಿ 2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. ಈ ಅವಧಿಯಲ್ಲಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಅವರ ಜಾಮೀನು ಅರ್ಜಿಗಳ ವಿಚಾರಣೆ ಸೇರಿದಂತೆ ಹಲವಾರು ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳ ಪೀಠಗಳ ನೇತೃತ್ವ ವಹಿಸಿದ್ದರು. ಚುನಾವಣಾ ಬಾಂಡ್ ರದ್ದತಿ, ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದತಿ ಎತ್ತಿ ಹಿಡಿದಂತಹ ಪ್ರಮುಖ ವಿಷಯಗಳ ತೀರ್ಪು ಪ್ರಕಟಿಸಿದ್ದ ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿರ್ಗಮಿತ ನ್ಯಾಯಮೂರ್ತಿಡಿ.ವೈ ಚಂದ್ರಚೂಡ್ ಅವರಿಂದ ತೆರವಾದ ಸ್ಥಾನಕ್ಕೆ ಈಗ ಸಂಜೀವ್ ಖನ್ನಾ ಏರುತ್ತಿದ್ದು, ಮೇ. 13, 2025 ರವರೆಗೆ ಅಧಿಕಾರದಲ್ಲಿ ಇರಲಿದ್ದಾರೆ. ನ್ಯಾ. ಖನ್ನಾ ಅವರ ತಂದೆ ದೇವ್‌ರಾಜ್ ಖನ್ನಾ ಕೂಡ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದರು.