ಎರಡನೇ ಸಿನಿಮಾದಲ್ಲೇ ಲಾಂಗ್ ಹಿಡಿದ ಯುವ, ನಿರ್ದೇಶನ ಯಾರದ್ದು?
ರಾಘವೇಂದ್ರ ರಾಜ್ಕುಮಾರ್ ಪುತ್ರ, ದೊಡ್ಮನೆ ಕುಡಿ ಯುವ ರಾಜ್ಕುಮಾರ್ ‘ಯುವ’ ಸಿನಿಮಾ ಮೂಲಕ ಅದ್ಧೂರಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.
ರಾಘವೇಂದ್ರ ರಾಜ್ಕುಮಾರ್ ಪುತ್ರ, ದೊಡ್ಮನೆ ಕುಡಿ ಯುವ ರಾಜ್ಕುಮಾರ್ ‘ಯುವ’ ಸಿನಿಮಾ ಮೂಲಕ ಅದ್ಧೂರಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಮೊದಲ ಸಿನಿಮಾವನ್ನು ಹೊಂಬಾಳೆ ನಿರ್ಮಾಣ ಮಾಡಿತ್ತು, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿ, ಸಪ್ತಮಿ ಗೌಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ದೊರಕಿತಾದರೂ ಸಿನಿಮಾ ದೊಡ್ಡ ಯಶಸ್ಸು ಗಳಿಸಲು ವಿಫಲವಾಯ್ತು. ಇದೀಗ ಯುವ ಎರಡನೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಎರಡನೇ ಸಿನಿಮಾಕ್ಕೆ ಮೂರು ದೊಡ್ಡ ನಿರ್ಮಾಣ ಸಂಸ್ಥೆಗಳು ಒಟ್ಟಾಗುತ್ತಿವೆ.
ಯುವ’ ನಟನೆಯ ಎರಡನೇ ಸಿನಿಮಾದ ಘೋಷಣೆ ಕೆಲವೇ ದಿನಗಳ ಹಿಂದೆ ಆಗಿತ್ತು. ಚಿತ್ರಕತೆಯ ಮೇಲೆ ಕೆಲವು ಕೈಗಳು ಇಟ್ಟಿರುವ ಚಿತ್ರ ಹಂಚಿಕೊಂಡು ಯುವ ರಾಜ್ಕುಮಾರ್ ಎರಡನೇ ಸಿನಿಮಾದ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದೀಗ ಯುವ ಸಿನಿಮಾದ ಮೊದಲ ಪೋಸ್ಟರ್ ಹೊರಬಿದ್ದಿದೆ. ಜೊತೆಗೆ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಸಹ ಬಹಿರಂಗಗೊಂಡಿದೆ. ಯುವ ರಾಜ್ಕುಮಾರ್ ಅವರ ಎರಡನೇ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನ ಮಾಡಲಿದ್ದಾರೆ.ಮೊದಲ ಸಿನಿಮಾದಲ್ಲಿ ಕಾಲೇಜು ಯುವಕ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ನಟಿಸಿದ್ದ ಯುವ ರಾಜ್ಕುಮಾರ್ ಎರಡನೇ ಸಿನಿಮಾದಲ್ಲಿ ಲಾಂಗ್ ಹಿಡಿದಿದ್ದಾರೆ. ಆ ಮೂಲಕ ದೊಡ್ಡಪ್ಪನ ಹಾದಿ ಹಿಡಿಯುವ ಪ್ರಯತ್ನದಂತೆ ಇದು ತೋರುತ್ತಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ರಕ್ತ ಮೆತ್ತಿದ ಕೈಯ್ಯೊಂದು ಲಾಂಗ್ ಹಿಡಿದುಕೊಂಡಿರುವ ಚಿತ್ರ ಇದೆ. ಇದೊಂದು ರೌಡಿಸಂ ಕತೆಯುಳ್ಳ ಸಿನಿಮಾ ಆಗಿರಲಿದೆ ಎಂಬುದನ್ನು ಈಗ ಬಿಡುಗಡೆ ಆಗಿರುವ ಪೋಸ್ಟರ್ ಸ್ಪಷ್ಟವಾಗಿ ಹೇಳುತ್ತಿದೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ನವೆಂಬರ್ 1 ರಂದು ಸಿನಿಮಾದ ಹೆಸರು ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಸಿನಿಮಾದ ನಾಯಕಿಯ ಘೋಷಣೆ ಸಹ ಇನ್ನೂ ಆಗಿಲ್ಲ.ಅಂದಹಾಗೆ ಈ ಸಿನಿಮಾಕ್ಕೆ ಮೂವರು ನಿರ್ಮಾಪಕರು. ಈ ಮೊದಲು ಯುವ ಅವರ ಎರಡನೇ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪಿಆರ್ಕೆ ಪ್ರೊಡಕ್ಷನ್ ಕಡೆಯಿಂದ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿತ್ತು. ಅದು ನಿಜವೇ ಆದರೂ ಅವರೊಟ್ಟಿಗೆ ಇನ್ನೂ ಇಬ್ಬರು ನಿರ್ಮಾಪಕರು ಇರಲಿದ್ದಾರೆ. ಕೆಆರ್ಜಿ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಕಂಬೈನ್ಸ್ ಒಟ್ಟಾಗಿ ಯುವ ಅವರ ಎರಡನೇ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಅಂದಹಾಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸ್ವತಂತ್ರ್ಯವಾಗಿ ಅಂದರೆ ಪುನೀತ್ ಅವರ ಸಲಹೆ ಇಲ್ಲದೆ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅಪ್ಪು ಹೋದ ಬಳಿಕ ಈವರೆಗೆ ಪಿಆರ್ಕೆ ಸಂಸ್ಥೆಯಿಂದ ಹೊರಬಂದಿರುವ ಎಲ್ಲ ಸಿನಿಮಾಗಳೂ ಅಪ್ಪು ಕೇಳಿ ಒಪ್ಪಿಗೆ ಸೂಚಿಸಿದ್ದ ಕತೆಗಳಾಗಿದ್ದವು. ಆದರೆ ಇದು ಮಾತ್ರ ಅಶ್ವಿನಿ ಅವರು ಕೇಳಿ ಓಕೆ ಹೇಳಿರುವ ಕತೆ. ರೋಹಿತ್ ಪದಕಿ ನಿರ್ದೇಶನ ಆಗಿರುವ ಕಾರಣ ನಿರೀಕ್ಷೆಗಳು ಸಹ ಹೆಚ್ಚಾಗಿಯೇ ಇವೆ.