ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

ಅರಣ್ಯಾಧಿಕಾರಿಗಳ ಸಾರ್ವಜನಿಕ ಪ್ರಕಟಣೆ ಅನ್ವಯ ಶೂಟಿಂಗ್ ನಡೆದಿದ್ದು ನಿಷೇಧಿತ ಪ್ರದೇಶ ಅಲ್ಲದಿದ್ದರೆ ಅದು ಮುಜರಾಯಿ ಇಲಾಖೆಯ ಸ್ಥಳವೇ ಎಂಬ ಅನುಮಾನ ಹುಟ್ಟಿಸಿದೆ.

Apr 10, 2025 - 12:08
ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದ ಮಲಯಾಳಂ ಚಿತ್ರದ ಶೂಟಿಂಗ್ ವಿಚಾರ ವಿವಾದ ಸ್ವರೂಪ ಪಡೆದಿದೆ. ಚಿತ್ರೀಕರಣ ನಡೆದ ಸ್ಥಳ ಮುಜುರಾಯಿ ಇಲಾಖೆಗೆ ಸೇರಿದ್ದಾ ಅಥವಾ ಅರಣ್ಯ ಇಲಾಖೆಗೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಪೆಣ್ಣು ಕೇಸ್ ಸಿನಿಮಾ ಚಿತ್ರೀಕರಣ ನಡೆದಿತ್ತು.

ಶೂಟಿಂಗ್‌ಗೆ ಅವಕಾಶ ಕೊಡುವ ವೇಳೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅರಣ್ಯ ಪರಿಸ್ಥಿತಿ ಮತ್ತು ಜೀವಿಶಾಸ್ತ್ರ ಇಲಾಖೆಯ ಪತ್ರದ ಸೂಚನೆ ಮೇರೆಗೆ ನಿಷೇಧಿತ ಪ್ರದೇಶ ಹೊರತುಪಡಿಸಿ ಜೊತೆಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ವನ್ಯ ಪ್ರಾಣಿಗಳಿಗೆ ಧಕ್ಕೆಯಾಗದಂತೆ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಷರತ್ತಿಗೆ ಒಳಪಟ್ಟು ಚಿತ್ರೀಕರಿಸುವಂತೆ ಅನುಮತಿ ಕೊಟ್ಟಿದ್ದಾರೆ. ಅಲ್ಲದೇ ಚಿತ್ರೀಕರಣ ತಂಡದ ಬಳಿ ಒಂದು ಲಕ್ಷ ರೂ. ಶುಲ್ಕವನ್ನು ಸಹ ಕಟ್ಟಿಸಿಕೊಂಡಿದ್ದಾರೆ. 

ಅರಣ್ಯಾಧಿಕಾರಿಗಳ ಸಾರ್ವಜನಿಕ ಪ್ರಕಟಣೆ ಅನ್ವಯ ಶೂಟಿಂಗ್ ನಡೆದಿದ್ದು ನಿಷೇಧಿತ ಪ್ರದೇಶ ಅಲ್ಲದಿದ್ದರೆ ಅದು ಮುಜರಾಯಿ ಇಲಾಖೆಯ ಸ್ಥಳವೇ ಎಂಬ ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಅವರನ್ನು ಕೇಳಿದ್ರೆ ಮುಜರಾಯಿ ಇಲಾಖೆಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಯಾರೂ ಕೂಡ ನಮ್ಮ ಅನುಮತಿಯನ್ನು ಕೇಳಿಲ್ಲ. ಸದ್ಯ ನಮ್ಮನ್ನು ಎಳೆದು ತರುವ ಪ್ರಯತ್ನವಾಗುತ್ತಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಅರಣ್ಯ ಇಲಾಖೆ ಯಾರದೋ ಮಾತಿಗೆ ಕಟ್ಟು ಬಿದ್ದು ಅನುಮತಿ ನೀಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ನಾವು ನಿಷೇಧಿತ ಪ್ರದೇಶದಲ್ಲಿ ಶೂಟಿಂಗ್ ನಡೆಸಲು ಅನುಮತಿ ಕೊಟ್ಟಿಲ್ಲ ಎಂಬ ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದೆ. ಶೂಟಿಂಗ್ ನಡೆದ ಸ್ಥಳ ನಿಷೇಧಿತ ಸ್ಥಳ ಅಲ್ಲವಾದರೆ ಆ ಜಾಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾ ಅಥವಾ ಅರಣ್ಯ ಇಲಾಖೆಗೆ ಸೇರಿದ್ದ ಜಾಗ ಎಂಬ ಹೊಸ ಚರ್ಚೆ ಹುಟ್ಟುಹಾಕಿದೆ.