ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಯುವ ಉಪನ್ಯಾಸಕಿ ಮಾರಣಾಂತಿಕ ಅಲರ್ಜಿ ಕಾಯಿಲೆಗೆ ಬಲಿ; ಅಂಗಾಂಗಳನ್ನು ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ
ಬಜ್ಪೆಯ ಪಡುಪೆರಾರೆ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿ ಪುತ್ರಿಯಾಗಿರುವ ಆಶಾ ಒಂದು ವರ್ಷದ ಹಿಂದೆಯಷ್ಟೇ ಅಲೋಶಿಯಸ್‌ನಲ್ಲೇ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿದ್ದರು. ನ.9ರಂದು ಮೆಟ್ಟಿಲು ಇಳಿಯುವಾಗ ತಲೆಸುತ್ತು ಬಂದು ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ವೈದ್ಯರು ತಪಾಸಣೆ ಮಾಡಿದಾಗ ಅವರಿಗೆ ಮಾರಣಾಂತಿಕ ಅಲರ್ಜಿ ಕಾಯಿಲೆಯಾದ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಬಾಧಿಸಿ ಮೆದುಳು ನಿಷ್ಕ್ರಿಯಗೊಂಡಿತ್ತು. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದ ಅವರ ಎಲ್ಲ ಅಂಗಾಂಗಳನ್ನು ವಿವಿಧ ಆಸ್ಪತ್ರೆಗಳಿಗೆ ಇಂದು ದಾನ ಮಾಡಲಾಗಿದೆ.
ಮಂಗಳೂರು: ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಯುವ ಉಪನ್ಯಾಸಕಿಯಾಗಿದ್ದ ಗ್ಲೋರಿಯಾ ಆಶಾ ರೊಡ್ರಿಗಸ್(23) ಅವರು ಕಾಲೇಜಿನಲ್ಲಿರುವಾಗಲೇ ಮಾರಣಾಂತಿಕ ಅಲರ್ಜಿ ಕಾಯಿಲೆಯಾದ ಅನಾಫಿಲ್ಯಾಕ್ಟಿಕ್ ರಿಯಾಕ್ಸನ್‌ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಗಮನಾರ್ಹವೆಂದರೆ, ಆಶಾ ರೋಡ್ರಿಗಸ್ ಅವರ ಎಲ್ಲ ಅಂಗಾಂಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಆ ಮೂಲಕ ಅವರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಆಶಾ ರೋಡ್ರಿಗಸ್ ಸಾವಿಗೆ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಕಾರಣ
23 ವರ್ಷದ ಗ್ಲೋರಿಯಾ ರೊಡ್ರಿಗಸ್ ಅವರಿಗೆ ಮಾರಣಾಂತಿಕ ಅಲರ್ಜಿ ಕಾಯಿಲೆಯಾದ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಕಾಣಿಸಿಕೊಂಡಿತ್ತು. ಕೆಲವು ದಿನಗಳ ಹಿಂದೆ ಊಟ ಮಾಡಿದ ಕೂಡಲೇ ಅವರಿಗೆ ದೇಹದ ಮೇಲೆ ಅಲರ್ಜಿಯ ರಿಯಾಕ್ಷನ್ ಉಂಟಾಗತೊಡಗಿತ್ತು. ದೇಹದ ಚರ್ಮದ ಮೇಲೆ ದದ್ದುಗಳು ಕಾಣಿಸಿ ಮತ್ತಷ್ಟು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾದರು. ಇದು ತೀವ್ರವಾದ ಮೆದುಳಿನ ಕಾಂಡದ ಅಸಾಧಾರಣ ಕ್ರಿಯೆಗೆ ಕಾರಣವಾಗಿತ್ತು. ಕೂಡಲೇ ಗ್ಲೋರಿಯಾ ಆಶಾ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಒಳಪಡಿಸಿದ್ದರು. ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದ್ದರೂ ಆಕೆಯ ಆರೋಗ್ಯ ಸುಧಾರಿಸಿರಲಿಲ್ಲ. ಬಳಿಕ ಮೆದುಳು ಕೂಡ ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಅದರಂತೆ ಇಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆಶಾ ಅವರ ಪ್ರತಿಯೊಂದು ಅಂಗಾಂಗವನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ.
ಆಶಾ ರೊಡ್ರಿಗಸ್ ಅವರ ಲಿವರ್ ಅನ್ನು ಎಜೆ ಆಸ್ಪತ್ರೆಗೆ ನೀಡಲಾಗಿದ್ದು, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಒಂದು ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆ ನೀಡಲಾಯಿತು. ಚರ್ಮ ಸೇರಿದಂತೆ ಉಳಿದ ಕಸಿ ಮಾಡಬಹುದಾದ ದೇಹದ ಭಾಗಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ನೀಡಲಾಗಿದೆ. ಆ ಮೂಲಕ ಅತಿ ಸಣ್ಣ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡಿರುವ ಆಶಾ ರೊಡ್ರಿಗಸ್ ಅವರು ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಬೇರೆಯವರಿಗೆ ಬದುಕನ್ನು ಕರುಣಿಸಿ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಆಶಾ ಅವರ ಅಕಾಲಿಕ ಮರಣಕ್ಕೆ ಸೇಂಟ್ ಅಲೋಶಿಯಸ್ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಮೂಹ ತೀವ್ರ ಸಂತಾಪ ಸೂಚಿಸಿದ್ದಾರೆ.
ಅನಾಫಿಲಿಯಾಕ್ಸಿಸ್ ಕಾಯಿಲೆ ಅಂದರೆ ಏನು?
ಅನಾಫಿಲಿಯಾಕ್ಸಿಸ್ ಎನ್ನುವುದು ಒಂದು ರೀತಿಯ ಮಾರಣಾಂತಿಕವಾದ ಅಲರ್ಜಿ ಕಾಯಿಲೆಯಾಗಿದೆ. ಇದನ್ನು ಅಲರ್ಜಿಕ್ ಶಾಕ್ ಎಂಬುದಾಗಿಯೂ ಕರೆಯಲಾಗುತ್ತದೆ. ಇಡೀ ದೇಹದ ಅಂಗಾಂಗಗಳನ್ನು ಬಾಧಿಸಬಹುದಾದ ಈ ಅಲರ್ಜಿಯು ಜೀವಕ್ಕೆ ಅಪಾಯಕಾರಿಯಾಗಿದೆ. ಈ ಮಾದರಿಯ ಅಲರ್ಜಿ ಕಾಣಿಸಿದಾಗ ದೇಹದಿಂದ ರಾಸಾಯನಿಕ ಬಿಡುಗಡೆಯಾಗಿ ಕ್ಷಣಮಾತ್ರದಲ್ಲಿ ಅದು ರಿಯಾಕ್ಷನ್ ಆಗಿ ಸಾವಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಕಾಯಿಲೆಯ ರೋಗಲಕ್ಷಣಗಳೆಂದರೆ ಚರ್ಮದ ದದ್ದು, ತುರಿಕೆ, ವಾಕರಿಕೆ, ವಾಂತಿ, ಉಸಿರಾಟದ ತೊಂದರೆ, ಉಬ್ಬಸ ಮತ್ತು ಆಘಾತ. ಕೂಡಲೇ ಚಿಕಿತ್ಸೆ ದೊರೆಯದಿದ್ದರೆ ಪ್ರಜ್ಞಾಹೀನ ಸ್ಥಿತಿ ಅಥವಾ ಸಾವಿಗೆ ಕಾರಣವಾಗಬಹುದು.