10 ವರ್ಷಗಳ ಬಳಿಕ ಸರ್ಕಾರ ನಡೆಸಲು ನಿರ್ಧರಿಸಿರುವ ಪಿಲಿಕುಳ ಕಂಬಳಕ್ಕೆ ಜೋರಾದ ಪೆಟಾದ ತಗಾದೆ; ಋತುವಿನ ಮೊದಲ ಕಂಬಳಕ್ಕೆ ಈಗ ಕಾನೂನಿನ ತೂಗುಗತ್ತಿ !
ಋತುವಿನ ಮೊದಲ ಕಂಬಳ ಪಿಲಿಕುಳದಲ್ಲಿ ನಡೆಯುವ ಬಗ್ಗೆ ಮೂಡಿದೆ ಅನುಮಾನ!
ಮಂಗಳೂರು: ಕಂಬಳ ಕರಾವಳಿ ಭಾಗದ ಜಾನಪದ ಕ್ರೀಡೆಯಾಗಿದ್ದು, ದಶಕದ ಬಳಿಕ ಸರ್ಕಾರದಿಂದ ಆಯೋಜನೆ ಮಾಡಲು ಉದ್ದೇಶಿಸಿರುವ ಈ ಋತುವಿನ ಮೊದಲ ಕಂಬಳ ಆಯೋಜನೆಗೆ ಪ್ರಾಣಿದಯಾ ಸಂಘಟನೆಯಾಗಿರುವ ಪೆಟಾದ ತಗಾದೆ ಜೋರಾಗಿದೆ. ಹೀಗಾಗಿ, ದಕ್ಷಿಣ ಕನ್ನಡದ ಪಿಲಿಕುಳದ ನಿಸರ್ಗಧಾಮದಲ್ಲಿ ಆಯೋಜಿಸಲು ಉದ್ದೇಶಿಸಿರುವ ಮೊದಲ ಕಂಬಳಕ್ಕೆ ಬಹುತೇಕ ಎಲ್ಲ ತಯಾರಿ ಪೂರ್ಣಗೊಂಡಿದ್ದರೂ ಇದೀಗ ಕಾನೂನಿನ ದೊಡ್ಡ ವಿಘ್ನ ಎದುರಾಗುವ ಸಾಧ್ಯತೆಯಿದೆ.
ಪಿಲಿಕುಳದಲ್ಲಿ ಜಿಲ್ಲಾಡಳಿತ ವತಿಯಿಂದ ನ.17ರಂದು ಆಯೋಜಿಸಲು ಉದ್ದೇಶಿಸಿದ್ದ ಕಂಬಳವನ್ನು ಚುನಾವಣೆ ನೀತಿ ಸಂಹಿತೆಯಿಂದಾಗಿ ಈಗಾಗಲೇ ಮುಂದೂಡಲಾಗಿದೆ. ಆದರೆ, ಗ್ರಾಮ ಪಂಚಾಯತ್ ಚುನಾವಣೆ ಮುಗಿದ ಬಳಿಕವೂ ಪಿಲಿಕುಳದಲ್ಲಿ ಕಂಬಳ ನಡೆಯುವ ಬಗ್ಗೆ ಇದೀಗ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ, ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಪಿಲಿಕುಳ ಕಂಬಳ ಆಯೋಜನೆಯನ್ನು ವಿರೋಧಿಸಿ ಪೆಟಾ ಸಂಘಟನೆಯವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದಿದೆ. ಈ ವೇಳೆ ಹೈಕೋರ್ಟ್‌ಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರವು, ಪಿಲಿಕುಳ ನಿಸರ್ಗಧಾಮದ ಬಳಿ ನ.17ರಂದು ಕಂಬಳ ಆಯೋಜನೆ ಮಾಡುವ ಬಗ್ಗೆ ಇಲ್ಲಿವರೆಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದೆ.
ಅಲ್ಲದೆ ಪೆಟಾ ಪರ ವಾದ ಮಂಡಿಸಿರುವ ವಕೀಲರು, ದಕ್ಷಿಣ ಕನ್ನಡ ಹಾಗೂ ಉಡುಪಿಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆ ಆಯೋಜನೆಗೆ ಆಕ್ಷೇಪವಿಲ್ಲ. ಪಿಲಿಕುಳ ಪ್ರಾಣಿ ಸಂಗ್ರಾಹಾಲಯದ ಸಮೀಪ ಕಂಬಳ ಕ್ರೀಡೆ ಆಯೋಜನೆ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಆದರೆ, ಇದರಿಂದ ಅಲ್ಲಿರುವ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಜತೆಗೆ ಪ್ರಾಣಿ ಸಂಗ್ರಾಹಾಲಯದ ನಿರ್ದೇಶಕರು ಕೂಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಕೋರ್ಟ್‌ಗೆ ತಿಳಿಸಿದ್ದಾರೆ. ಆ ಮೂಲಕ ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಲಾಗಿದೆ.
ಅತ್ತ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ನ.17ರಂದು ಪಿಲಿಕುಳದಲ್ಲಿ ಕಂಬಳ ಸ್ಪರ್ಧೆ ನಡೆಸುವ ನಿರ್ಧಾರ ಕೈಗೊಂಡಿಲ್ಲ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ಥಳದಲ್ಲಿ ಕಂಬಳ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಂಬಳ ಸ್ಪರ್ಧೆ ಉಸ್ತುವಾರಿಯಾಗಿರುತ್ತಾರೆ. ಹೀಗಾಗಿ, ಅವರನ್ನು ಅರ್ಜಿದಾರರು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ವಾದ-ವಿವಾದ ಆಲಿಸಿದ ಹೈಕೋರ್ಟ್ ಪೀಠವು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಸೇರಿಸಲು ಅನುಮತಿಯನ್ನು ನೀಡಿದೆ. ಆ ಮೂಲಕ ಈ ಪ್ರಕರಣದ ವಿಚಾರಣೆಯನ್ನು ನ.20ಕ್ಕೆ ಮುಂದೂಡಿದೆ.
ಕೋರ್ಟ್‌ನಲ್ಲಿ ಈ ವಿವಾದ ಇತ್ಯರ್ಥವಾಗುವವರೆಗೂ ಪಿಲಿಕುಳದಲ್ಲಿ ಕಂಬಳ ಆಯೋಜನೆಯಾಗುವುದು ಅನುಮಾನವಿದೆ. ಅಲ್ಲದೆ, ಒಂದುವೇಳೆ ಕೋರ್ಟ್ ಕೂಡ ಪೆಟಾ ಅರ್ಜಿಯನ್ನು ಪರಿಗಣಿಸಿ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಿದರೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕಂಬಳ ಆಯೋಜನೆ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗುವ ಆತಂಕ ಕೂಡ ಎದುರಾಗಿದೆ. ಒಟ್ಟಾರೆ, ಸರ್ಕಾರದ ವತಿಯಿಂದ ಪಿಲಿಕುಳದಲ್ಲಿ ನಡೆಸಲು ಉದ್ದೇಶಿಸಿರುವ ದೊಡ್ಡ ಮಟ್ಟದ ಕಂಬಳಕ್ಕೆ ಪೆಟಾದವರ ತಗಾದೆಯು ಕಂಬಳ ಪ್ರಿಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಪಿಲಿಕುಳ ಕಂಬಳಕ್ಕೆ ಎಲ್ಲ ಸಿದ್ಧತೆ ಪೂರ್ಣ
ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಈಗಾಗಲೇ ಎಲ್ಲ ರೀತಿಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದ್ದು, ಕಂಬಳ ಕರೆ ಪುನರ್ ನವೀಕರಣ ಕಾರ್ಯವೂ ಪೂರ್ಣಗೊಂಡಿದೆ. ಈ ಕಂಬಳ ಕೂಟದಲ್ಲಿ ಸುಮಾರು 150ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಲಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಪಿಲಿಕುಳದಲ್ಲಿ 10 ವರ್ಷಗಳ ಬಳಿಕ ಕಂಬಳ ಆಯೋಜಿಸುವುದಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ತಯಾರಿ ನಡೆಸಲಾಗಿದೆ. ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ 2014ರಲ್ಲಿ ಕೊನೆಯ ಬಾರಿಗೆ ಕಂಬಳ ನಡೆದಿತ್ತು. 2015ರಲ್ಲಿ ಕಂಬಳ ಆಯೋಜನೆ ಗೊಂಡಿರಲಿಲ್ಲ. 2016ರಲ್ಲಿ ಕಂಬಳದ ಮೇಲೆ ನಿಷೇಧ ಹೇರಿದ್ದ ಕಾರಣ ಕರಾವಳಿ ಭಾಗದಲ್ಲಿ ಎಲ್ಲೂ ಕಂಬಳ ಆಯೋಜ ಮಾಡಿರಲಿಲ್ಲ.