ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಾಸ್ಯುಟಿಕಲ್ ವಿಭಾಗಕ್ಕೆ 20ನೇ ವಾರ್ಷಿಕೋತ್ಸವದ ಸಂಭ್ರಮ

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್‌ ಕಾಲೇಜು ಹೋಮಿಯೋಪತಿ ಔಷಧಗಳ ಬದ್ಧತೆಗೆ ಹೆಸರುವಾಸಿಯಾಗಿದೆ. ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಾಸ್ಯುಟಿಕಲ್ ವಿಭಾಗವು ದೇರಳಕಟ್ಟೆ ಕ್ಯಾಂಪಸ್‌ಗೆ ಸ್ಥಳಾಂತರಗೊಂಡು ಇದೀಗ 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.

Nov 12, 2024 - 16:17
Nov 12, 2024 - 16:38
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಾಸ್ಯುಟಿಕಲ್ ವಿಭಾಗಕ್ಕೆ 20ನೇ  ವಾರ್ಷಿಕೋತ್ಸವದ ಸಂಭ್ರಮ
Anniversary celebrations at Father Muller Homoeopathic Medical College

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್‌ ಕಾಲೇಜಿನ ಫಾದರ್‌ ಮುಲ್ಲರ್‌ ಫಾರ್ಮಾಸ್ಯುಟಿಕಲ್ ವಿಭಾಗವು 20 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 
ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗವು ತನ್ನ ಉತ್ತಮ ಗುಣಮಟ್ಟದ, ನೈಜ  ಮತ್ತು ಕೈಗೆಟುಕುವ ಹೋಮಿಯೋಪತಿ ಔಷಧಿಗಳ ಬದ್ಧತೆಗೆ ಹೆಸರುವಾಸಿಯಾಗಿದ್ದು, ದೇರಳಕಟ್ಟೆ ಕ್ಯಾಂಪಸ್‌ಗೆ ಸ್ಥಳಾಂತರಗೊಂಡ 20 ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ವಿಂಶತಿ  ಜುಬಿಲಿ ಎಂದೂ ಕರೆಯಲ್ಪಡುವ ಈ ಆಚರಣೆ ಒಂದು ಮೈಲಿಗಲ್ಲು ಆಗಿದ್ದು, ಸಾರ್ವಜನಿಕರಿಗೆ ತಾಜಾ ಮತ್ತು ಪರಿಣಾಮಕಾರಿ ಹೋಮಿಯೋಪತಿ ಪರಿಹಾರಗಳನ್ನು ಒದಗಿಸುವಲ್ಲಿ ಎರಡು ದಶಕಗಳ ಸಮರ್ಪಿತ ಸೇವೆಯ ಸಂಕೇತವಾಗಿದೆ.

ಆಚರಣೆಯ ಮಹತ್ವ

2004ರಲ್ಲಿ ದೇರಳಕಟ್ಟೆಯಲ್ಲಿ ಅತ್ಯಾಧುನಿಕ ಸೌಲಭ್ಯದ ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಾಸ್ಯುಟಿಕಲ್ ವಿಭಾಗದ ಸ್ಥಾಪನೆಯಾಗಿದ್ದು, ಅದರ ಸ್ಮರಣಾರ್ಥ ವಿಂಶತಿ ಆಚರಿಸುತ್ತಿದೆ. ಈ ಆಚರಣೆಯು 1880 ರಲ್ಲಿ ಈ ವಿಭಾಗವನ್ನು ಸ್ಥಾಪಿಸಿದ ಫಾ. ಅಗಸ್ಟಸ್ ಮುಲ್ಲರ್, ಎಸ್.ಜೆ. ಅವರ ಪರಂಪರೆಯ ಗೌರವಾರ್ಥ ಮಾತ್ರವಲ್ಲದೆ ವಿಶ್ವಾಸಾರ್ಹ ಹೋಮಿಯೋಪತಿ ಆರೈಕೆಯ ಮೂಲಕ ಜನರನ್ನು "ಗುಣಪಡಿಸುವ  ಮತ್ತು ಸಾಂತ್ವನಗೊಳಿಸುವ " ಸಂಸ್ಥೆಯ ಅಚಲ ಬದ್ಧತೆಯ ಪ್ರತೀಕವಾಗಿದೆ. 
ಕಳೆದ 20 ವರ್ಷಗಳಲ್ಲಿ, ದೇರಳಕಟ್ಟೆ ಕ್ಯಾಂಪಸ್ ಉನ್ನತ ಗುಣಮಟ್ಟದ ಹೋಮಿಯೋಪತಿ ಔಷಧಿ ಮತ್ತು ಉತ್ಪನ್ನಗಳ ತಯಾರಿಕೆಗೆ ಮೂಲಾಧಾರವಾಗಿದ್ದು, ಈ ಮೂಲಕ ಭಾರತದಾದ್ಯಂತ ಮತ್ತು ಹೊರಗಿನ ರೋಗಿಗಳಿಗೆ ಪ್ರಯೋಜನವನ್ನು ಒದಗಿಸುತ್ತಿದೆ. ಈ ವಾರ್ಷಿಕೋತ್ಸವದ ಆಚರಣೆಯು ವಿಭಾಗದ ಪ್ರಯಾಣವನ್ನು ಸ್ಮರಿಸಲು, ಸಾಧನೆಗಳನ್ನು ಅಂಗೀಕರಿಸಲು ಮತ್ತು ಮಾನವೀಯ ಸೇವೆಯನ್ನು ಮುಂದುವರಿಸಲು ಹೊಸ ಗುರಿ ಹಾಕಿ ಕೊಳ್ಳಲು ಒಂದು ಅವಕಾಶವಾಗಿದೆ.

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗವು ಸಮುದಾಯದ ಆರೋಗ್ಯ ಮತ್ತು ಹೋಮಿಯೋಪತಿಯ ಪ್ರಗತಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತದೆ. ಶುದ್ಧ, ಗುಣಮಟ್ಟದ ಔಷಧಗಳ ತಯಾರಿಕೆ,ಕೈಗೆಟುಕುವ ದರ ,ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸುವುದು ,ಹೋಮಿಯೋಪತಿ ಮತ್ತು ಆರೋಗ್ಯ ಸಂಶೋಧನೆಗೆ ಉತ್ತೇಜನ,ವೈವಿಧ್ಯಮಯ ಉತ್ಪನ್ನ  ಇತ್ಯಾದಿಗಳು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗದ ಪ್ರಮುಖ ಉದ್ದೇಶಗಳಾಗಿದೆ.ಹಾಗೆಯೇ ವ್ಯಾಪಕ ಶ್ರೇಣಿಯ ಉತ್ಪನ್ನಗಳೊಂದಿಗೆ-ಮದರ್ ಟಿಂಕ್ಚರ್‌ಗಳು, ಡೈಲ್ಯೂಷನ್‌ಗಳು, ಬಯೋಕೆಮಿಕ್ ಸಂಯೋಜನೆಗಳು, ಮಾತ್ರೆಗಳು, ತೈಲಗಳು ಇತ್ಯಾದಿಯಾಗಿ ವಿಭಾಗವು ವಿವಿಧ ಆರೋಗ್ಯ ಅಗತ್ಯಗಳನ್ನು ನಿಖರ ಮತ್ತು ಗುಣಮಟ್ಟದೊಂದಿಗೆ ಪೂರೈಸುತ್ತದೆ.



ಆಚರಣೆಯ ಮುಖ್ಯಾಂಶಗಳು

ವಿಂಶತಿ ಆಚರಣೆಯ ಅಂಗವಾಗಿ ದೇರಳಕಟ್ಟೆಯಲ್ಲಿ ವಿಭಾಗದ 20 ವರ್ಷಗಳ ಪಯಣದ ಹಿನ್ನೋಟ ವಿವರಣೆ, ಗಣ್ಯ ಅತಿಥಿಗಳಿಂದ ಭಾಷಣಗಳು ಹಾಗೂ ವಿಭಾಗದ ಸಾಧನೆಗಳನ್ನು ಪ್ರಚುರ ಪಡಿಸುವ ಮತ್ತು ಭವಿಷ್ಯದ ಯೋಜನೆಗಳ ಪ್ರದರ್ಶನ ಸೇರಿದಂತೆ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸ್ಮರಣೆ ಸಂಚಿಕೆಯೊಂದನ್ನು ಪ್ರಕಟಿಸಲಾಗುತ್ತಿದ್ದು, ಅದರಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗ ರೂಪಿಸಿದ ಮೈಲಿಗಲ್ಲುಗಳು, ಬೆಳೆದು ಬಂದ ಇತಿಹಾಸ ಮತ್ತು ಈ ವಿಭಾಗವನ್ನು ಕಟ್ಟಿ ಬೆಳೆಸಿದ ವ್ಯಕ್ತಿಗಳ ವಿವರಗಳನ್ನು ದಾಖಲಿಸಲಾಗುತ್ತದೆ. 
ವಿಂಶತಿ ಜುಬಿಲಿಯು ಕೇವಲ ಇತಿಹಾಸದ ಆಚರಣೆಯಲ್ಲ, ಬದಲಾಗಿ ಅದು ಎಲ್ಲರಿಗೂ ಚಿಕಿತ್ಸೆ, ಸೌಕರ್ಯ ಮತ್ತು ಉತ್ತಮ-ಗುಣಮಟ್ಟದ ಹೋಮಿಯೋಪತಿ ಆರೈಕೆಯನ್ನು ನೀಡುವ ತನ್ನ ಬದ್ಧತೆಯನ್ನು ಮುಂದುವರಿಸುವ ಭರವಸೆಯ ಭವಿಷ್ಯದ ಆಚರಣೆಯಾಗಿದೆ.
1880 ರಲ್ಲಿ ಫಾದರ್  ಅಗಸ್ಟಸ್‌ ಮುಲ್ಲರ್, ಎಸ್.ಜೆ. ಅವರು ಸ್ಥಾಪಿಸಿದ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗವು ಹೋಮಿಯೋಪಥಿಕ್ ಔಷಧಿಗಳ ತಯಾರಿಕೆಯಲ್ಲಿ 144 ವರ್ಷಗಳ ಪರಂಪರೆಯನ್ನು ಹೊಂದಿದೆ. ಭಾರತದಾದ್ಯಂತ ಮತ್ತು ಜಾಗತಿಕವಾಗಿ ತನ್ನ ವಿಶ್ವಾಸಾರ್ಹ, ಉತ್ತಮ-ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. "ಹೀಲ್ ಮತ್ತು ಕಂಫರ್ಟ್" ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅರ್ಪಣಾ ಮನೋಭಾವ ಮತ್ತು ಸಮಗ್ರತೆಯೊಂದಿಗೆ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತದೆ. ದೇರಳಕಟ್ಟೆಯಲ್ಲಿರುವ ಅತ್ಯಾಧುನಿಕ ಸೌಲಭ್ಯಗಳ ವಿಭಾಗವು  ಸಾಂಪ್ರದಾಯಿಕ ಹೋಮಿಯೋಪತಿಯ ಆಧುನಿಕ ವಿಧಾನವನ್ನು ಪ್ರತಿನಿಧಿಸುತ್ತಾ ವಿಜ್ಞಾನದ ಸಂಯೋಜನೆಯೊಂದಿಗೆ ತನ್ನ ಗುರಿಗಳನ್ನು ಸಾಧಿಸಲು ಬದ್ಧವಾಗಿದೆ.