ದಕ್ಷಿಣ ಕನ್ನಡಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿರುವ ದರ್ಶನ್ ಎಚ್.ವಿ. ಯಾರು? ಐಎಎಸ್‌ನಲ್ಲಿ ಟಾಪರ್ ಆಗಿದ್ದ ಅವರ ಹಿನ್ನಲೆ ಏನು?
ದಕ್ಷಿಣ ಕನ್ನಡ ಜಿಲ್ಲೆಗೆ ಐಎಎಸ್ ಪರೀಕ್ಷೆಯಲ್ಲಿ ಕರ್ನಾಟಕದಿಂದ ಟಾಪರ್ ಆಗಿದ್ದ ಅತ್ಯಂತ ಪ್ರತಿಭಾನ್ವಿತ ಹಾಗೂ ಯುವ ಅಧಿಕಾರಿ ದರ್ಶನ್ ಎಚ್.ವಿ. ಅವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ದಕ್ಷಿಣ ಕನ್ನಡಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿರುವ ದರ್ಶನ್ ಎಚ್.ವಿ. ಯಾರು? ಐಎಎಸ್‌ನಲ್ಲಿ ಟಾಪರ್ ಆಗಿದ್ದ ಅವರ ಹಿನ್ನಲೆ ಏನು?
ದಕ್ಷಿಣ ಕನ್ನಡ ಜಿಲ್ಲೆಗೆ ಐಎಎಸ್ ಪರೀಕ್ಷೆಯಲ್ಲಿ ಕರ್ನಾಟಕದಿಂದ ಟಾಪರ್ ಆಗಿದ್ದ ಅತ್ಯಂತ ಪ್ರತಿಭಾನ್ವಿತ ಹಾಗೂ ಯುವ ಅಧಿಕಾರಿ ದರ್ಶನ್ ಎಚ್.ವಿ. ಅವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಯಾವುದೇ ರೀತಿಯ ವಿವಾದಗಳಿಗೂ ಗುರಿಯಾಗದೆ ಬಹಳ ಕೂಲ್ ಆಗಿ ಆಡಳಿತ ನಿಭಾಗಿಸಿದ್ದ ತಮಿಳುನಾಡು ಮೂಲದ ಮುಲ್ಲೈ ಮುಗಿಲನ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಮುಲ್ಲೈ ಮುಗಿಲನ್ ಅವರು 2023ರ ಜೂ.17ರಂದು ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದು, ಇದೀಗ 2025ರ ಜೂ.18ಕ್ಕೆ ವರ್ಗಾವಣೆಗೊಂಡು ಜಿಲ್ಲೆಯಿಂದ ನಿರ್ಗಮಿಸುತ್ತಿರುವುದು ವಿಶೇಷ.
ಐಎಎಸ್‌ನಲ್ಲಿ 48ನೇ ರ್ಯಾಂಕ್ ಪಡೆದಿದ್ದ ದರ್ಶನ್
ಎಂಜಿನಿಯರಿಂಗ್ ಹಿನ್ನಲೆ ಹೊಂದಿರುವ ದರ್ಶನ್ ಅವರು 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು 2015ರಲ್ಲಿ ನಡೆದ ಐಎಎಸ್ ಮೈನ್ ಪರೀಕ್ಷೆಯಲ್ಲಿ ಕರ್ನಾಟಕದ ಕೇಡರ್‌ನಿಂದ 48ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಟಾಪರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಸದ್ಯ ಅವರು ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕರಾವಳಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ನಿರ್ವಹಿಸುವ ಅವಕಾಶ ಹಾಗೂ ಹೊಣೆಗಾರಿಕೆಯನ್ನು ಪಡೆದುಕೊಂಡಿದ್ದಾರೆ.
ಐಎಎಸ್ ಪಾಸ್ ಆಗಿದ್ದ ದರ್ಶನ್ ಅವರು ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದರು. ಜತೆಗೆ ಬೆಳಗಾವಿಯಲ್ಲಿಯೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದರು. ನಂತರದಲ್ಲಿ 2023ರಲ್ಲಿ ತುಮಕೂರು ಮಹಾನಗರ ಪಾಲಿಕೆಯೂ ಆಯುಕ್ತರಾಗಿದ್ದರು. ನಂತರದಲ್ಲಿ ಐಟಿಬಿಟಿ ಇಲಾಖೆ ನಿರ್ದೇಶಕರಾಗಿ ಕರ್ನಾಟಕದಲ್ಲಿ ಸ್ಟಾರ್ಟಪ್‌ಗಳ ಉತ್ತೇಜನಕ್ಕೆ ಹೆಚ್ಚಿನ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವೆಡೆ ಸ್ಟಾರ್ಟಪ್‌ಗಳ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ಹಾಗೂ ಮುತುವರ್ಜಿ ವಹಿಸಿದ್ದರು. ಆಡಳಿತ ನಿರ್ವಹಣೆ ಜತೆ ಐಟಿ-ಬಿಟಿ, ಸೈಬರ್ ಸೆಕ್ಯೂರಿಟಿ, ಸ್ಟಾರ್ಟಪ್‌ಗಳ ಬಗ್ಗೆ ಹಲವು ವೇದಿಕೆಗಳಲ್ಲಿ ವಿಚಾರಗಳನ್ನು ಮಂಡಿಸಿ ಗಮನಸೆಳೆದಿದ್ದಾರೆ. ಸದ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕೆಲಸ ಮಾಡುತ್ತಿರುವ ದರ್ಶನ್ ಅವರು ಇದೀಗ ಬುದ್ಧಿವಂತರ ಜಿಲ್ಲೆಯೆಂದು ಕರೆಯಿಸಿಕೊಂಡಿರುವ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಬಂದಿರುವುದು ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರುವುದಕ್ಕೆ ಉತ್ತಮ ಅವಕಾಶ ಲಭಿಸಿದಂತಾಗಿದೆ.
ಬೆಂಗಳೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಒಂದೇ ತಿಂಗಳಲ್ಲಿ ಜಿಲ್ಲಾ ಅಧಿಪತಿಗಳ ಬದಲಾವಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ವರ್ಗಾವಣೆಯಾಗಿರುವುದು ಗಮನಾರ್ಹ. ಎರಡು ವಾರದ ಹಿಂದೆಯಷ್ಟೇ ಒಂದೇ ದಿನ ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅನುಪಮ್ ಅಗರ್‌ವಾಲ್, ಜಿಲ್ಲಾ ಎಸ್‌ಪಿಯಾಗಿದ್ದ ಯತೀಶ್ ಎನ್. ಅವರನ್ನು ವರ್ಗಾಯಿಸಲಾಗಿತ್ತು. ಎಸ್‌ಪಿ ಜಾಗಕ್ಕೆ ಉಡುಪಿ ಜಿಲ್ಲೆಯಲ್ಲಿ ಎಸ್‌ಪಿಯಾಗಿದ್ದ ಅರುಣ್ ಕುಮಾರ್ ಹಾಗೂ ಕಮಿಷನರ್ ಆಗಿ ಅತ್ಯಂತ ಖಡಕ್ ಅಧಿಕಾರಿಯೆಂದೇ ಗುರುತಿಸಿಕೊಂಡಿರುವ ಸುಧೀರ್ ರೆಡ್ಡಿ ಅವರ ನೇಮಕವಾಗಿದೆ. ಈ ಎರಡು ಆಯಕಟ್ಟಿನ ಹುದ್ದೆಗಳಿಗೆ ಹೊಸ ಅಧಿಕಾರಿಗಳ ನೇಮಕವಾದ ಬೆನ್ನಲ್ಲೇ ಇದೀಗ ಯುವ ಅಧಿಕಾರಿಯೊಬ್ಬರು ದಕ್ಷಿಣ ಕನ್ನಡಕ್ಕೆ ಡಿಸಿಯಾಗಿ ಆಗಮಿಸುತ್ತಿದ್ದಾರೆ. ಹೀಗಿರುವಾಗ, ಜಿಲ್ಲೆಯ ಚುಕಾಣಿ ಹಿಡಿದಿರುವ ಈ ಮೂವರು ಹೊಸ ಉನ್ನತ ದರ್ಜೆ ಅಧಿಕಾರಿಗಳು ದಕ್ಷಿಣ ಕನ್ನಡದಲ್ಲಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಏನೆಲ್ಲ ಸುಧಾರಣೆಗಳನ್ನು ತರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.