ಡಿ.28ರಂದು ಮಂಗಳೂರು ಕಂಬಳ: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಮಂಗಳೂರು ಕಂಬಳಕ್ಕೆ ಉತ್ತಮ ಜನಮನ್ನಣೆ ಸಿಗುತಿದ್ದು ಇದು ಕರಾವಳಿಯ ಪ್ರವಾಸೋದ್ಯಮಕ್ಕೆ ಮೈಲುಗಲ್ಲಾಗಲಿದೆ. ಕಂಬಳವನ್ನು ಮುಂದಿನ ತಲೆಮಾರುಗಳಿಗೆ ಉಳಿಸುವ ಉದ್ದೇಶದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯೋನ್ಮುಖರಾಗುವಂತೆ ಕ್ಯಾ. ಚೌಟ ಅವರಿಂದ ಕರೆ.

Nov 5, 2024 - 19:50
ಡಿ.28ರಂದು ಮಂಗಳೂರು ಕಂಬಳ: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
Mangalore to Host 8th Edition of Kambala on December 28th

ಮಂಗಳೂರು: ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ 8ನೇ ವರ್ಷದ ಮಂಗಳೂರು ಕಂಬಳ ದಿನಾಂಕ 28 ಡಿಸೆಂಬರ್ 2024 ರಂದು ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕರೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಕಂಬಳದ ಪೂರ್ವಭಾವಿ ಸಭೆಯು ದಿನಾಂಕ 04 ನವೆಂಬರ್ 2024 ರಂದು ಸಾಯಂಕಾಲ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು.

ಸಭೆಯನ್ನು ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷರು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಮಂಗಳೂರು ಕಂಬಳಕ್ಕೆ ಉತ್ತಮ ಜನಮನ್ನಣೆ ಸಿಗುತಿದ್ದು ಇದು ಕರಾವಳಿಯ ಪ್ರವಾಸೋದ್ಯಮಕ್ಕೆ ಮೈಲುಗಲ್ಲಾಗಲಿದೆ. ಕಂಬಳವನ್ನು ಮುಂದಿನ ತಲೆಮಾರುಗಳಿಗೆ ಉಳಿಸುವ ಉದ್ದೇಶದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯೋನ್ಮುಖರಾಗುವಂತೆ ಹಾಗೂ ಕಂಬಳಕ್ಕೆ ಮೆರುಗನ್ನು ನೀಡುವ ದೃಷ್ಟಿಯಿಂದ ಕರಾವಳಿಯ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಉಪಸ್ತಿತರಿದ್ದು ಮಾತನಾಡಿದ ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿಯವರು ಕಂಬಳ ಈ ಮಣ್ಣಿನ ಅಸ್ಮಿತೆ, ಅದನ್ನು ಮುಂದುವರಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಮಂಗಳೂರು ಕಂಬಳ ಮೇಲ್ಪಂಕ್ತಿಯಾಗಿದೆ ಎಂದರು.

ಜಿಲ್ಲಾ ಕಂಬಳ ಸಮಿತಿಯ ವಿಜಯಕುಮಾರ್ ಕಂಗಿನಮನೆ ಮಾತನಾಡಿ ಮಂಗಳೂರು ನಗರದಲ್ಲಿ ನಡೆಯುವ ಕಂಬಳ ಜನ ಆಕರ್ಷಣೀಯ ಕೇಂದ್ರವಾಗುತ್ತಿದ್ದು, ಕಂಬಳಕ್ಕೆ ಇನ್ನಷ್ಟು ಮೆರೆಗು ನೀಡುವ ನಿಟ್ಟಿನಲ್ಲಿ ಜಿಲ್ಲಾ ಕಂಬಳ ಸಮಿತಿಯ ವತಿಯಿಂದ ಸರ್ವ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪಿ.ಆರ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗರೋಡಿ , ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷರಾದ ಕಿರಣ್ ಕುಮಾರ್, ಅನಿಲ್ ಕುಮಾರ್, ಮಂಗಳೂರು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಕಂಬಳ ಸಮಿತಿಯ ಕೋಶಾಧಿಕಾರಿ ಪ್ರೀತಮ್ ರೈ ಉಪಸ್ಥಿತರಿದ್ದರು. ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ಸ್ವಾಗತಿಸಿ, ಉಪಾಧ್ಯಕ್ಷ ಪ್ರಕಾಶ್ ಪೂಜಾರಿ ಗರೋಡಿ ವಂದಿಸಿದರು, ಕಾರ್ಯದರ್ಶಿ ಮನ್ಮತ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.