ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ ಪರಿಹಾರಕ್ಕೆ ಪ್ಲ್ಯಾನ್

ಬಿಡಿಎಗೆ ನಕಲಿ ದಾಖಲೆ ನೀಡಿ ಪರಿಹಾರ ಪಡೆಯಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ವಿಚಕ್ಷಣ ಡಿವೈಎಸ್ಪಿ ಪಿ.ಮಲ್ಲೇಶ್ ನೀಡಿದ ದೂರಿನ ಮೇರೆಗೆ ಶೇಷಾದ್ರಿ ಪುರಂ ಪೊಲೀಸರು ಐವರನ್ನು ಬಂಧಿಸಿದ್ದಾರೆ.

Oct 9, 2024 - 11:09
ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ ಪರಿಹಾರಕ್ಕೆ ಪ್ಲ್ಯಾನ್

ಬಿಡಿಎಗೆ ನಕಲಿ ದಾಖಲೆ ನೀಡಿ ಪರಿಹಾರ ಪಡೆಯಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ವಿಚಕ್ಷಣ ಡಿವೈಎಸ್ಪಿ ಪಿ.ಮಲ್ಲೇಶ್ ನೀಡಿದ ದೂರಿನ ಮೇರೆಗೆ ಶೇಷಾದ್ರಿ ಪುರಂ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಶ್ರೀನಿವಾಸ್​, ನಾಗರಾಜ್​, ರವಿಕುಮಾರ್​, ಭರತ್​​, ಸ್ವಾಮಿ ಬಂಧಿತ ಆರೋಪಿಗಳು. ನಾಗರಾಜ್​ನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗುತ್ತಿದ್ದು, ಉಳಿದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಲಾಗಿದೆ.ಆರೋಪಿಗಳು ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ. ಪರಿಹಾರಕ್ಕೆ ಮುಂದಾಗಿದ್ದರು. ಖಾಸಗಿ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಡಿಎ, ಕಂದಾಯ, ತಹಶೀಲ್ದಾರ್, ಭೂಸ್ವಾಧೀನ ಸೇರಿದಂತೆ ಸಂಬಂಧಪಟ್ಟ ಕೆಲ ಅಧಿಕಾರಿಗಳಿಗೆ ಪೊಲೀಸರಿಂದ ನೋಟಿಸ್​ ಜಾರಿ ಮಾಡಲಾಗಿದೆ. ಕೆಲ ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೊಲೀಸರಿಂದ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ.

ಆರೋಪಿಗಳು ಮೂಲ ಮಾಲೀಕರ ಸಂಬಂಧಿಕರೆಂದು ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು. ಚಲ್ಲಘಟ್ಟದ ಒಟ್ಟು ಆರು ಎಕರೆ ಜಮೀನಿಗೆ ಸಂಬಂಧಪಟ್ಟಂತೆ ಮೂಡ್ಲಪ್ಪ ಎಂಬುವವರಿಗೆ ಸೇರಿದ ಆಸ್ತಿಗೆ ಸುಳ್ಳು ದಾಖಲೆ ಸಲ್ಲಿಸಿ ಪರಿಹಾರಕ್ಕೆ ಯತ್ನಿಸಿದ್ದರು.

ಅಧಿಕಾರಿಗಳ ವಿರುದ್ಧ ಎಫ್​ಐಆರ್

ಪುಟ್ಟಮ್ಮ, ಗಂಗಮ್ಮ, ಉಮೇಶ್, ಲಕ್ಷ್ಮಮ್ಮ, ಶ್ರೀನಿವಾಸ್, ಸಂತೋಷ್, ರವಿಕುಮಾರ್, ಭರತ್, ಸುನೀತ್, ಆಶಾ, ಸ್ವಾಮಿ, ನಾಗರಾಜ್ ಎಂಬುವವರ ವಿರುದ್ಧ ಆರೋಪ ಮಾಡಲಾಗಿತ್ತು. ದಾಖಲೆಗಳ ಪರಿಶೀಲನೆ ನಡೆಸದೆ ಕರ್ತವ್ಯಲೋಪ ಎಸಗಿದ್ದಕ್ಕಾಗಿ ಅಧಿಕಾರಿಗಳ ಮೇಲೂ ದೂರು ನೀಡಲಾಗಿದೆ.