ವಿಮಾನ ನಿಲ್ದಾಣ, ರಸ್ತೆ ಕಾಮಗಾರಿ ಸೇರಿದಂತೆ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅಸ್ತು
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮಾಡಲಾಗಿದ್ದು, ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು, ಅಕ್ಟೋಬರ್ 28: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮಾಡಲಾಗಿದ್ದು, ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 30 ವಿಷಯಗಳನ್ನು ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಚಿವ ಸಂಪುಟ ನಿರ್ಧಾರಗಳು
1) ಕರ್ನಾಟಕ ಗೃಹ ಮಂಡಳಿಯ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸೂರ್ಯನಗರ 1ನೇ ಹಂತದ ನಿವೇಶನ ಸಂಖ್ಯೆ: 953 ಮತ್ತು 454, 455ರಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಎರಡು ಬಹುಮಹಡಿ ವಸತಿ ಸಮುಚ್ಚಯಗಳನ್ನು (50 ಮತ್ತು 40 ಫ್ಲಾಟ್‌ಗಳು) ನಿರ್ಮಿಸುವ ಒಟ್ಟು ರೂ. 101 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
2) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ 19 ಸ್ವಾಧೀನದಾರರನ್ನು ಸ್ಥಳಾಂತರಿಸಲಾಗಿತ್ತು. ಇವರ ಪುನರ್ ವಸತಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾದಿಓಣಿ ಗ್ರಾಮದಲ್ಲಿ 33-24 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಪ್ರತಿ ಕುಟುಂಬಕ್ಕೆ 2 ಎಕರೆ ಸಾಗುವಳಿಗಾಗಿ ಹಾಗೂ 4 ಗುಂಟೆ ವಸತಿಗಾಗಿ ಉಚಿತವಾಗಿ ಮಂಜೂರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.
3) ಇನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಲಬಾಳ ಹಳ್ಳಿ ಹತ್ತಿರದ ಕೃಷ್ಣಾ ಕೃಷ್ಣಾ ನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಒದಗಿಸುವ ರೂ. 177.10 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದಿಸಿದೆ.
4) ಸಮಾಜ ಕಲ್ಯಾಣ ಇಲಾಖೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಕ್ಯಾಬಿನೆಟ್ ಮಂಜೂರಾತಿ.
5) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸಲು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ಒಟ್ಟು ರೂ. 14.24 ಕೋಟಿ ರೂ. ಅಂದಾಜು ಮೊತ್ತದ ‘ಓದು ಕರ್ನಾಟಕ’ ಚಟುವಟಿಕೆಗೆ ಕ್ಯಾಬಿನೆಟ್ ಅನುಮೋದಿಸಿದೆ.