ಬಿಜೆಪಿ ಕಾಲದ ಬೆಲೆ ಏರಿಕೆ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ?: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ

. ದೆಹಲಿಯಲ್ಲಿ ಡಿಕೆಶಿ ಮಾತನಾಡಿ, ಬೆಲೆಏರಿಕೆ ಬಗ್ಗೆ ಬಿಜೆಪಿ ಧರಣಿ ಹಾಗೂ ರಸ್ತೆತಡೆ ಮಾಡುತ್ತಿರುವುದರ ಬಗ್ಗೆ ಕೇಳಿದಾಗ, "ನಾವು ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.

Apr 3, 2025 - 16:38
ಬಿಜೆಪಿ ಕಾಲದ ಬೆಲೆ ಏರಿಕೆ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ?: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ
D K SHIVAKUMAR

ದೆಹಲಿ: ಈ ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಟೋಲ್ ದರ ಏಕೆ ಹೆಚ್ಚಳವಾಗಿದೆ? ಇದರ ಬಗ್ಗೆ ಬಿಜೆಪಿಯವರು ಏತಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಡೆಯ ಬಗ್ಗೆ ಕುಹಕವಾಡಿದರು. ದೆಹಲಿಯಲ್ಲಿ ಡಿಕೆಶಿ ಮಾತನಾಡಿ, ಬೆಲೆಏರಿಕೆ ಬಗ್ಗೆ ಬಿಜೆಪಿ ಧರಣಿ ಹಾಗೂ ರಸ್ತೆತಡೆ ಮಾಡುತ್ತಿರುವುದರ ಬಗ್ಗೆ ಕೇಳಿದಾಗ, "ನಾವು ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರ ಬದುಕನ್ನು ಸಹ ನಾವು ನೋಡಬೇಕಲ್ಲವೇ? ರೈತರ ಪಕ್ಷ ಎಂದು ಕೇವಲ ಹಸಿರು ಟವೆಲ್ ಹಾಕಿಕೊಂಡರೆ ಸಾಕೇ?. ಊರುಗಳಿಗೆ ನಾವುಗಳು ಹೋದಾಗ ರೈತರು ನಮ್ಮನ್ನು ಹೊಡೆಯಲು ಬಂದಿಲ್ಲ ಅದೇ ನಮ್ಮ ಪುಣ್ಯ. ಅನೇಕ ರೈತರು ಹಸುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾರೆ. ಈ ಹಿಂದೆ ಬೆಲೆ ಹೆಚ್ಚಳವಾದಾಗ ಅವರುಗಳೂ ಜನಪ್ರತಿನಿಧಿಗಳಾಗಿದ್ದರು ಅಲ್ಲವೇ?"ಎಂದು ಕುಟುಕಿದರು.

ಪ್ರತಿಭಟನೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಒಡಕು ಮೂಡಿರುವ ಬಗ್ಗೆ ಕೇಳಿದಾಗ, "ಅವರ ಪಕ್ಷದ ವಿಚಾರ ನನಗೆ ಬೇಡ. ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಬಗ್ಗೆ ಸುಮ್ಮನೆ ಚರ್ಚೆ ಏಕೆ? ಬಿಜೆಪಿಯವರ ಪ್ರತಿಭಟನೆಗೆ ನಾನು ಶುಭಕೋರುತ್ತೇನೆ. ಅವರು ಪಕ್ಷ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ ಮಾಡಲಿ" ಎಂದರು.

ಗ್ಯಾರಂಟಿ ವೆಚ್ಚ ಹೊರೆಯಾಗುತ್ತಿರುವ ಕಾರಣಕ್ಕೆ ಬೆಲೆ ಹೆಚ್ಚಳ ಮಾಡುತ್ತಿದ್ದಾರೆ ಎನ್ನುವ ಪ್ರತಿಪಕ್ಷಗಳ ಟೀಕೆಯ ಬಗ್ಗೆ ಕೇಳಿದಾಗ, "ಅವರುಗಳು ಮಾತನಾಡ ಬೇಕಲ್ಲ ಎಂದು ಮಾತನಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ" ಎಂದು ಹೇಳಿದರು. 

ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವುದು ಸಾಮಾನ್ಯ:ಡಿಕೆಶಿ

ಮುಖ್ಯಮಂತ್ರಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ‌ಮಾಡಿದ್ದರ ಬಗ್ಗೆ ಕೇಳಿದಾಗ, "ರಾಹುಲ್ ಗಾಂಧಿ ಅವರು ಪಕ್ಷದ ರಾಷ್ಟ್ರೀಯ ನಾಯಕರು ಅದಕ್ಕೆ ಬೇಟಿ ಮಾಡಿದ್ದಾರೆ. ನಾನು ಕೂಡ ಬಂದಾಗ ‌ಭೇಟಿ ಮಾಡಿದ್ದೇನೆ. ಹಲವಾರು ನಾಯಕರನ್ನು ಭೇಟಿಯಾಗುತ್ತೇವೆ. ಕಾಂಗ್ರೆಸ್ ಕಚೇರಿ ಪಕ್ಷದ ದೇವಸ್ಥಾನವಿದ್ದಂತೆ ಭೇಟಿ ಮಾಡಿದರೆ ತಪ್ಪೇನಿದೆ?. ವಿಧಾನ ಪರಿಷತ್ ಸ್ಥಾನಗಳ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಚರ್ಚೆಗೆ ಬಂದಾಗ ಮಾತನಾಡುತ್ತೇವೆ" ಎಂದರು.

"ದೆಹಲಿಯ ನೂತನ ಕರ್ನಾಟಕ ಭವನ ನಮ್ಮ ರಾಜ್ಯದ ಜನತೆಯ ರಾಯಭಾರಿಯಾಗಿ ಕೆಲಸ ಮಾಡಲಿದೆ. ಅಂದರೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳಿಗೆ, ಸರ್ಕಾರದ ಅಧಿಕಾರಿಗಳಿಗೆ ಸೇರಿದಂತೆ ಅನೇಕರಿಗೆ ಈ ಭವನ ಉಪಯೋಗವಾಗಲಿದೆ. ಇಲ್ಲಿ ನಡೆಯುವ ಚರ್ಚೆಗಳಿಂದ ರಾಜ್ಯಕ್ಕೆ ಉಪಯೋಗವಾಗಲಿ ಎಂದು ಆಶಿಸುತ್ತೇನೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಗಳನ್ನು ಕಾರ್ಯಗತಗೊಳಿಸಲಾಗುವುದು, ಇದರ ಬಗ್ಗೆ ಮುಖ್ಯಮಂತ್ರಿಗಳು ಸಹ ಸಹಮತ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದರು.