ಕರ್ನಾಟಕದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ; ಈ ವಿಕ್ರಂ ಗೌಡ ಯಾರು, ಎಲ್ಲಿಯವನು?

ಕಳೆದ 20 ವರ್ಷಗಳಿಂದ ಪೊಲೀಸರು ಹುಡುಕಾಡುತ್ತಿದ್ದ ಕರ್ನಾಟಕದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡನನ್ನು ಎಎನ್‌ಎಫ್‌ ತಂಡವು ಸೋಮವಾರ ರಾತ್ರಿ ನಡೆಸಿದ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದೆ. ದಿನಸಿ ವಸ್ತು ಖರೀದಿಸುವುದಕ್ಕೆ ಹೆಬ್ರಿಯ ಸೀತಂಬೈಲು ಎಂಬಲ್ಲಿಗೆ ಬಂದಿದ್ದ ವೇಳೆ ಈ ಗುಂಡಿನ ಕಾಳಗ ನಡೆದಿದ್ದು, ಈ ನಕ್ಸಲ್‌ ತಂಡದಲ್ಲಿದ್ದ ಉಳಿದ ಐದಾರು ಮಂದಿ ತಪ್ಪಿಸಿಕೊಂಡು ಕಾಡು ಸೇರಿದ್ದಾರೆ.

Nov 19, 2024 - 07:49
Nov 19, 2024 - 08:57
ಕರ್ನಾಟಕದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ; ಈ ವಿಕ್ರಂ ಗೌಡ ಯಾರು, ಎಲ್ಲಿಯವನು?
most wanted naxal criminal vikram Gowda killed in an encounter at Karkal-Hebbri forest area

ಮಂಗಳೂರು: ಕರ್ನಾಟಕದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ನಾಯಕನಾಗಿ ಕಳೆದ ಎರಡು ದಶಕಗಳಿಂದ ಕರ್ನಾಟಕ ಸೇರಿದಂತೆ ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರದ ದಟ್ಟ ಅರಣ್ಯದಲ್ಲಿ ಓಡಾಡುತ್ತ ನಕ್ಸಲ್‌ ಸಂಘಟನೆಯನ್ನು ಪ್ರಬಲಗೊಳಿಸುವುದಕ್ಕೆ ಪ್ರಯತ್ನಿಸುತ್ತಿದ್ದ ಕ್ರಿಮಿನಲ್‌ ವಿಕ್ರಂ ಗೌಡನನ್ನು ಸೋಮವಾರ(ನ.18) ರಾತ್ರಿ ನಡೆದ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್‌)ಯ ತಂಡವು ಹತ್ಯೆ ಮಾಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ಅದರಲ್ಲಿಯೂ(naxal vikram Gowda) ಮಲೆನಾಡು ಭಾಗದಲ್ಲಿ ನಕ್ಸಲ್‌ ಚಟುವಟಿಕೆಗೆ ಮರ್ಮಾಘಾತ ನೀಡುವಲ್ಲಿ ಇದೀಗ ಇಲ್ಲಿನ ಪೊಲೀಸರು ಹಾಗೂ ನಕ್ಸಲ್‌ ನಿಗ್ರಹ ಪಡೆಯ ತಂಡದವರು ಯಶಸ್ವಿಯಾಗಿದ್ದಾರೆ. 

 ಕಳೆದ ವಾರ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಗೆ ನಕ್ಸಲ್‌ ನಾಯಕಿ ಮುಂಡಗಾರು ಲತಾ, ವಿಕ್ರಂ ಗೌಡ ಹಾಗೂ ಇತರರ ತಂಡವೊಂದು ಬಂದಿತ್ತು. ಅವರ ಮನೆಯಲ್ಲಿ ಊಟ ಮಾಡಿದ್ದ ತಂಡವು ಬಳಿಕ ಮೂರು ಬಂದೂಕನ್ನು ಅಲ್ಲೇ ಬಿಟ್ಟು ಹೋಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಹಾಗೂ ನಕ್ಸಲ್‌ ನಿಗ್ರಹ ಪಡೆಯವರು ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಶೋಧಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

ವಿಕ್ರಂ ಗೌಡ ಹಾಗೂ ಮುಂಡಗಾರು ಲತಾ ಬಗ್ಗೆ ಖಚಿತ ಸುಳಿವು ಪಡೆದುಕೊಂಡಿದ್ದ ನಕ್ಸಲ್‌ ನಿಗ್ರಹ ಪಡೆಯು ಕಾರ್ಯಾಚರಣೆಗೆ ಸಕಲ ಸಿದ್ದತೆ ಮಾಡಿಕೊಂಡಿತ್ತು. ಅದರಂತೆ ಸೋಮವಾರ ರಾತ್ರಿ ಅಕ್ಕಿ-ಸಾಮಾನು ಖರೀದಿಸುವುದಕ್ಕೆಂದು ಸುಮಾರು ಐದು ಮಂದಿಯ ನಕ್ಸಲರ ತಂಡವು ಹೆಬ್ರಿಯ ಸೀತಂಬೈಲು ಸಮೀಪ ಬಂದಿತ್ತು ಎನ್ನಲಾಗಿದೆ. ಈ ವೇಳೆ ಎಎನ್‌ಎಫ್‌(Anti Naxal Force) ತಂಡವು ಗುಂಡಿನ ದಾಳಿ ನಡೆಸಿ ವಿಕ್ರಂ ಗೌಡ ಹಾಗೂ ಇತರರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯುವ ಪ್ರಯತ್ನ ಮಾಡಿದೆ. ಆದರೆ, ವಿಕ್ರಂ ಗೌಡ ಹಾಗೂ ಇತರ ನಕ್ಸಲರು ಶಸ್ತ್ರಸಜ್ಜಿತವಾಗಿದ್ದ ಕಾರಣ ಅವರು ಕೂಡ ಎಎನ್‌ಎಫ್‌(ANF) ತಂಡದ ಮೇಲೆ ಪ್ರತಿದಾಳಿ ನಡೆಸಿದೆ. ಆದರೆ, ಹಲವು ಬಾರಿ ಪೊಲೀಸರ ಕೈಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದ ಈ ಮೋಸ್ಟ್‌ ವಾಂಟೆಂಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ಕೊನೆಗೂ ಎಎನ್‌ಎಫ್‌ ತಂಡದ ಗುಂಡಿಗೆ ಬಲಿಯಾಗಿದೆ. ಆ ಮೂಲಕ ಮಲೆನಾಡು ಪ್ರದೇಶದಲ್ಲಿ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ನಕ್ಸಲ್‌ ಚಟುವಟಿಕೆಗಳಿಗೆ ದೊಡ್ಡ ಬ್ರೇಕ್‌ ಹಾಕುವಲ್ಲಿ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ. ಈ ನಡುವೆ ವಿಕ್ರಂ ಗೌಡ ಸೇರಿದಂತೆ ಆರು ಮಂದಿ ನಕ್ಸಲರು ತಮ್ಮ ಹಿಂಸಾ ಹಾದಿ ಕೊನೆಗೊಳಿಸಿ ಪೊಲೀಸರ ಮುಂದೆ ಶರಣಾಗುವುದಕ್ಕೂ ಸಿದ್ಧರಾಗಿದ್ದರು ಎನ್ನುವ ಬಗ್ಗೆಯೂ ವರದಿಯಾಗಿತ್ತು.

ಇನ್ನೊಂದೆಡೆ ವಿಕ್ರಂ ಜತೆ ಕೊಪ್ಪದ ಮನೆಯೊಂದಕ್ಕೆ ಬಂದು ಹೋಗಿದ್ದ ನಕ್ಸಲ್‌ ನಾಯಕಿ ಮುಂಡಗಾರು ಲತಾ ಸೇರಿದಂತೆ ಇತರೆ ಪ್ರಮುಖ ನಕ್ಸಲರ ತಂಡವು ಈ ಎನ್‌ಕೌಂಟರ್‌ನಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಮತ್ತೆ ಕಾಡು ಸೇರಿದೆ. ಆದರೆ, ತಮ್ಮ ತಂಡದ ಅದರಲ್ಲಿಯೂ ಕರ್ನಾಟಕದ ಕಮಾಂಡರ್‌ ರೂಪದಲ್ಲಿ ನಕ್ಸಲ್‌ ಚಟುವಟಿಕೆ ನೇತೃತ್ವ ವಹಿಸಿದ್ದ ವಿಕ್ರಂ ಗೌಡನ ಹತ್ಯೆಯು ಎಎನ್‌ಎಫ್‌ ಹಾಗೂ ಪೊಲೀಸರ ಪಾಲಿಗೆ ದೊಡ್ಡ ಮಟ್ಟದ ಯಶಸ್ವಿಯಾಗಿದ್ದರೆ, ಅತ್ತ ನಕ್ಸಲ್‌ ತಂಡಕ್ಕೆ ವಿಕ್ರಂ ಗೌಡನ ಎನ್‌ಕೌಂಟರ್‌ ದೊಡ್ಡ ಮಟ್ಟದ ಹೊಡೆತ ನೀಡಿದೆ.

ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ ಯಾರು?

ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಮ್ ಗೌಡನನ್ನು ಎಎನ್ಎಫ್ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದೆ. ವಿಕ್ರಂ ಗೌಡ ಮೂಲತಃ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ(Naxal Vikram Gowda) ಕೂಡ್ಲು ನಾಡ್ವಾಲು ಗ್ರಾಮದವನು. ಹೆಬ್ರಿಯ ಕಬ್ಬಿನಾಲೆ ಸಮೀಪದ ಕಾಡಿನಂಚಿನ ಪರಿಸರದಲ್ಲಿ ಬೆಳೆದ ವಿಕ್ರಂ ಗೌಡ ನೇತ್ರಾವತಿ ದಳದ ನಾಯಕನಾಗಿದ್ದ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಬಳಿಕ ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ಎಂಟ್ರಿ ಕೊಟ್ಟಿದ್ದ. ಕರಾವಳಿಯಲ್ಲಿ(Nethravathi Dala) ನೇತ್ರಾವತಿ ದಳವನ್ನು ವಿಕ್ರಂ ಗೌಡ ಮುನ್ನಡೆಸುತ್ತಿದ್ದರೆ ಅತ್ತ ಮಲೆನಾಡಿನ ಭಾಗದಲ್ಲಿ ಮುಂಡಗಾರು ಲತಾ ಈ ತಂಡದ ಮುಂದಾಳತ್ವ ವಹಿಸಿದ್ದಳು.

 ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವವನ್ನು ನೆರೆಯ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ ಇತ್ತ ಕರ್ನಾಟಕದಲ್ಲಿ ವಿಕ್ರಮ್ ಗೌಡ ವಹಿಸಿದ್ದ. ಕಾರ್ಮಿಕ ಸಂಘಟನೆ ಹಿನ್ನಲೆಯಿಂದ ಬಂದಿದ್ದ ವಿಕ್ರಮ್ ಗೌಡ ನಕ್ಸಲ್‌ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದ. ಮೆನಸಿಹಾಡ್ಯದಲ್ಲಿ 20 ವರ್ಷಗಳ ಹಿಂದೆ ನಡೆದಿದ್ದ ಸಾಕೇತ್‌ ರಾಜನ್‌ ಹತ್ಯೆ ಬಳಿ ವಿಕ್ರಂ ಗೌಡ ಕೂಡ ಬಂದೂಕು ಹಿಡಿದು ಕಾಡು ಸೇರಿದ್ದ. ಕಳೆದ 20 ವರ್ಷಗಳಿಂದ ನಕ್ಸಲ್ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಮಲೆನಾಡು, ಕೇರಳ ಹಾಗೂ ತಮಿಳುನಾಡಿನ ಭಾಗದಲ್ಲಿ ನಕ್ಸಲ್‌ ಚಟುವಟಿಕೆಯನ್ನು ಮತ್ತೆ ಪ್ರಬಲಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದ ಎನ್ನಲಾಗಿದೆ. ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿದ್ದು, ಪೊಲೀಸರ ಪಾಲಿಗೂ ಮೋಸ್ಟ್‌ ವಾಂಟೇಡ್‌ ಕ್ರಿಮಿನಲ್‌ ಆಗಿದ್ದ. ಪೊಲೀಸರು ಹಾಗೂ ಎಎನ್‌ಎಫ್‌ ತಂಡದವರು ಕೂಡ ವಿಕ್ರಂ ಗೌಡನ ತಲೆಗಾಗಿ ತೀವ್ರ ಶೋಧಾ ಕಾರ್ಯವನ್ನು ನಡೆಸುತ್ತಿದ್ದರು. ಕೇರಳದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಈತ ಕೂದಲೆಳೆಯ ಅಂತರದಲ್ಲಿ ಈತ ಪೊಲೀಸರಿಂದ ತಪ್ಪಿಸಿಕೊಂಡಿದ್ದ.

ಮಲೆನಾಡಿನಲ್ಲಿ ನಕ್ಸಲ್‌ ಚಟುವಟಿಕೆ

ಕರ್ನಾಟಕದಲ್ಲಿ ಒಂದು ಕಾಲದಲ್ಲಿ ನಕ್ಸಲ್‌ ಚಟುವಟಿಕೆ ಹೆಚ್ಚು ಸಕ್ರಿಯವಾಗಿದ್ದ ಜಿಲ್ಲೆ ಅಂದರೆ ಅದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ. ರಾಜ್ಯದ ನಕ್ಸಲ್‌ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌( Saketh rajan ). ಮೆಣಸಿನಹಾಡ್ಯದಲ್ಲಿ 2005ರ ಫೆ.6ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ಸಾಕೇತ್‌ ರಾಜನ್‌ ಬಲಿಯಾಗಿದ್ದ. ಅದಕ್ಕೂ ಮೊದಲು 2003ರ ನವೆಂಬರ್‌ನಲ್ಲಿ ಕಾರ್ಕಳದ ಈದು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದರು. ಸಾಕೇತ್‌ ರಾಜನ್‌ ಹತ್ಯೆಯ ಬಳಿಕ ಮಲೆನಾಡಿನ ಪಶ್ಚಿಮ ದಟ್ಟದ ಅರಣ್ಯದಲ್ಲಿ ನಕ್ಸಲ್‌ ಚಟುವಟಿಕೆ ನೇತೃತ್ವ ವಹಿಸಿದ್ದವರಲ್ಲಿ ಈ ವಿಕ್ರಂ ಗೌಡ ಹಾಗೂ ಲತಾ ಮುಂಡಗಾರು ಪ್ರಮುಖರು. ಹೀಗಾಗಿ, ಈ ಇಬ್ಬರು ನಕ್ಸಲರನ್ನು ಮಟ್ಟ ಹಾಕುವುದಕ್ಕೆ ಎಎನ್‌ಎಫ್‌ ಹಾಗೂ ಪೊಲೀಸರು ಸಕಲ ತಯಾರಿಯಲ್ಲಿದ್ದರು.

  

 2021ರಲ್ಲಿ ಬಿಜಿ ಕೃಷ್ಣಮೂರ್ತಿ ಹಾಗೂ ಪ್ರಭಾಳನ್ನು ಬಂಧಿಸಿದ ಬಳಿಕ ಮುಂಚೂಣಿಗೆ ಬಂದಿರುವ ಹೆಸರು ಮುಂಡಗಾರು ಲತಾ( Latha) ಹಾಗೂ ವಿಕ್ರಂ ಗೌಡ. ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾ ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲೀಸ್ಟ್ ನಲ್ಲಿಯೂ ಲತಾ ಹಾಗೂ ವಿಕ್ರಂ ಗೌಡ ಕೂಡ ಇದ್ದ. ಹಲವಾರು ವರ್ಷಗಳಿಂದ ಈ ಇಬ್ಬರು ಭೂಗತರಾಗಿದ್ದುಕೊಂಡಿದ್ದರು. ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಕ್ಯಾಂಪ್ ನಲ್ಲಿ ಮುಂಡಗಾರು ಲತಾ ಹಾಗೂ ವಿಕ್ರಂ ಗೌಡ ಕೂಡ ಇದ್ದರು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಕೂಡ ಹೇಳಲಾಗಿತ್ತು. ಲತಾ ಸತ್ತಿದ್ದಾಳೆ ಎನ್ನುವ ಬ್ಯಾನರ್ ಕೂಡ ಹಾಕಲಾಗಿತ್ತು. ಆದರೆ ಪೈರಿಂಗ್ ಸಂದರ್ಭದಲ್ಲಿ ಮುಂಡಗಾರು ಲತಾ ಹಾಗೂ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದರು ಎನ್ನುವ ಮಾಹಿತಿಯು ಪೊಲೀಸರಿಗೆ ಬಳಿಕ ಲಭಿಸಿತ್ತು.

ಇತ್ತೀಚೆಗೆ ನಕ್ಸಲರು ಎಲ್ಲೆಲ್ಲಿಗೆ ಬಂದು ಹೋಗಿದ್ದರು.

ಕಳೆದ ಸುಮಾರು ಒಂದು ವರ್ಷದಿಂದೀಚೆಗೆ ಲತಾ ಮುಂಡಗಾರು ಹಾಗೂ ವಿಕ್ರಂ ಗೌಡ ನೇತೃತ್ವದ ತಂಡವು ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ದಟ್ಟ ಅರಣ್ಯ ಹಾಗೂ ಅರಣ್ಯದಂಚಿನ ಗ್ರಾಮಗಳಿಗೆ ಬಂದು ಹೋಗಿದ್ದ ಬಗ್ಗೆ ಸಾಕಷ್ಟು ಬಾರಿ ಸುಳಿವು ಸಿಕ್ಕಿತ್ತು. ಅದರಲ್ಲಿಯೂ ದಕ್ಷಿಣ ಕನ್ನಡದ ಕೆಲವು ಕಡೆ ಗ್ರಾಮಗಳಿಗೆ ಬಂದಿದ್ದ ಇದೇ ವಿಕ್ರಂ ಗೌಡ ಹಾಗೂ ತಂಡವು ಗ್ರಾಮಸ್ಥರ ಮನೆಯಲ್ಲಿ ಊಟ ಮಾಡಿ ಅಲ್ಲಿಂದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದ ಬಗ್ಗೆ ನಕ್ಸಲ್‌ ನಿಗ್ರ ಪಡೆಯವರಿಗೆ ಮಾಹಿತಿ ಲಭ್ಯವಾಗಿತ್ತು. ಆ ನಂತರದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನಕ್ಸಲ್‌ ಚಟುವಟಿಕೆ ಹಾಗೂ ಈ ತಂಡದ ಮೇಲೆ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿತ್ತು.

 ನಕ್ಸಲರಿಂದ ಮನೆಗಳ ಮೇಲೆ ದಾಳಿ

2024ರ ಏ.4ರಂದು ದಕ್ಷಿಣ ಕನ್ನಡದ ಬಿಳಿನೆಲೆ ಗ್ರಾಮದ ಚೇರಾ

2024ರ ಮಾ.17ರಂದು ಕೊಡಗಿನ ಕೂಜಿಮಲೆ

2018ರ ಫೆ.2ಕ್ಕೆ ಸಂಪಾಜೆ ಸಮೀಪದ ಕೊಯಿನಾಡು

2018ರ ಜ.15, ಅಡ್ಡಹೊಳೆ ಸಮೀಪದ ಮನೆಗೆ

ಇತ್ತೀಚೆಗೆ ಕಾರ್ಕಳದ ಈದು ಗ್ರಾಮದಲ್ಲಿ ನಕ್ಸಲ್‌ ತಂಡ ಪ್ರತ್ಯಕ್ಷ